ಬಂಟ್ವಾಳ: ಚಲಿಸುವ ರೈಲಿನಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಬಂಟ್ವಾಳ: ಚಲಿಸುವ ರೈಲಿನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರಿಗೆ ರೈಲಿನ ಸಹಪ್ರಯಾಣಿಕರು ಸಹಜ ಹೆರಿಗೆ ಮಾಡಿಸಿ, ತಾಯಿ ಮತ್ತು ಮಗುವನ್ನು ರಕ್ಷಿಸಿದ ಮಾನವೀಯ ಘಟನೆ ರವಿವಾರ ಮುಸ್ಸಂಜೆ ಬಂಟ್ವಾಳ ಸಮೀಪದ ಬಿ.ಸಿ.ರೋಡ್ ಬಳಿ ಈ ವಿದ್ಯಮಾನ ನಡೆದಿದೆ.

ಮುರ್ಡೇಶ್ವರ – ಬೆಂಗಳೂರು ಎಕ್ಸ್‌ಪ್ರೆಸ್ (16586) ರೈಲಿನ ಸಾಮಾನ್ಯ ಬೋಗಿಯಲ್ಲಿ ಪೊನ್ನಮ್ಮ ಎಂಬ ಗರ್ಭಿಣಿ ಪ್ರಯಾಣಿಸುತ್ತಿದ್ದರು. ಸಂಜೆ 7:22ಕ್ಕೆ ರೈಲು ಬಂಟ್ವಾಳ ನಿಲ್ದಾಣಕ್ಕೆ ಬಂದಾಗ ಪೊನ್ನಮ್ಮ ಅವರಿಗೆ ತೀವ್ರ ರಕ್ತಸ್ರಾವ ಮತ್ತು ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ರೈಲ್ವೆ ಸಿಬ್ಬಂದಿ ಆಂಬುಲೆನ್ಸ್‌ಗೆ ಮಾಹಿತಿ ನೀಡಿದರು.
ಆದರೆ ಆಂಬುಲೆನ್ಸ್ ಬರುವ ಮೊದಲೇ ಹೆರಿಗೆ ನೋವು ಹೆಚ್ಚಾದಾಗ, ರೈಲ್ವೆ ಎಸ್ಕಾರ್ಟಿಂಗ್ ಸಿಬ್ಬಂದಿ ಅರುಣ ಎಸ್. ಎಸ್. ಮತ್ತು ಹೆಡ್ ಕಾನ್‌ಸ್ಟೇಬಲ್ ಶಂಕರಮೂರ್ತಿ ಅವರು ತುರ್ತು ಪರಿಸ್ಥಿತಿಯನ್ನು ನಿಭಾಯಿಸಿ ರೈಲಿನ ಮಹಿಳಾ ಪ್ರಯಾಣಿಕರ ಸಹಾಯದಲ್ಲಿ ಹೆರಿಗೆ ಮಾಡಿಸಿದರು. ಪೊನ್ನಮ್ಮ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತಾಯಿ ಮತ್ತು ಮಗುವನ್ನು ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ. ಸಿಬ್ಬಂದಿಯ ಈ ಶ್ಲಾಘನೀಯ ಕೆಲಸವನ್ನು ನೈಋತ್ಯ ರೈಲ್ವೆಯ ಮೈಸೂರು ವಿಭಾಗ ಅಭಿನಂದಿಸಿದೆ.