ರೈಲು ನಿಲ್ದಾಣದಲ್ಲಿ ಶಾರ್ಟ್ ಸರ್ಕ್ಯೂಟ್ ಆತಂಕ: ಪಾಟ್ನಾ ಪ್ಯಾಸೆಂಜರ್ ರೈಲಿನಲ್ಲಿ ಬೆಂಕಿ; ಪ್ರಯಾಣಿಕರು ಪಾರು!

ಪಾಟ್ನಾ: ಬಿಹಾರದ ಸಸಾರಾಮ್ ರೈಲು ನಿಲ್ದಾಣದಲ್ಲಿ ಪಾಟ್ನಾಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಹೊತ್ತಿ ಉರಿದಿರುವ ಘಟನೆ ಇಂದು ನಡೆದಿದೆ. ಬೆಂಕಿಯನ್ನು ನಿಯಂತ್ರಿಸಲು ಸಿಬ್ಬಂದಿ ಹರಸಾಹಸ ಪಡುತ್ತಿರುವಾಗ ರೈಲು ಬೋಗಿಯಿಂದ ದಟ್ಟವಾದ ಹೊಗೆ ಹೊರಬರುತ್ತಿರುವ ದೃಶ್ಯಗಳು ಕಂಡುಬಂದಿವೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ. ಸಸಾರಾಮ್-ಪಾಟ್ನಾ ಫಾಸ್ಟ್ ಪ್ಯಾಸೆಂಜರ್ ರೈಲು ಬೆಳಿಗ್ಗೆ 6 ಗಂಟೆಗೆ ಹೊರಡಬೇಕಿತ್ತು ಇದಕ್ಕೂ ಸ್ವಲ್ಪ ಮೊದಲು ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವುನೋವುಗಳು ಸಂಭವಿಸಿಲ್ಲ.
