ಅಯೋಧ್ಯೆ ದೇಣಿಗೆ ಕಳವು ಹಗರಣ: ಬಿಜೆಪಿ ಸರ್ಕಾರದ ವಿರುದ್ಧ ಜೋಶಿಮಠದ ಸ್ವಾಮೀಜಿ ಗಂಭೀರ ಆರೋಪ!

ಹೊಸದಿಲ್ಲಿ: ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ದೇಣಿಗೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಉತ್ತರಾಖಂಡದ ಜೋಶಿಮಠದ ಸ್ವಾಮೀಜಿ ಅವಿಮುಕೇಶ್ವರಾನಂದ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಳ್ಳತನಕ್ಕೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ಸರ್ಕಾರವು ತನ್ನ ಜನರನ್ನು ದೇವಾಲಯದ ಟ್ರಸ್ಟ್ ನಲ್ಲಿ ನಿಯೋಜಿಸಿದೆ ಎಂದು ಸ್ವಾಮೀಜಿ ಮಂಗಳವಾರ ಆಪಾದಿಸಿದ್ದಾರೆ.
ಗೋಸಂರಕ್ಷಣೆ ಕುರಿತ ಜನಜಾಗೃತಿ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದ ಸ್ವಾಮೀಜಿ ಅವರು, ದೇವಾಲಯಗಳ ನಿರ್ಮಾಣ ಹಾಗೂ ನಿರ್ವಹಣೆ ಧಾರ್ಮಿಕರ ಸುಪರ್ದಿಯಲ್ಲೇ ಇರಬೇಕೆಂದು ಆಗ್ರಹಿಸಿದ್ದಾರೆ. ಗೋವಿಗೆ ರಾಷ್ಟ್ರಮಾತೆಯ ಸ್ಥಾನಮಾನ ನೀಡದ ಸರ್ಕಾರಗಳು ಜನರ ಬೆಂಬಲಕ್ಕೆ ಅರ್ಹವಾಗಿಲ್ಲವೆಂದರು.

ಉತ್ತರಪ್ರದೇಶದ ಬಹರೈಚ್ ಜಿಲ್ಲೆಯ ಪಯಾಗ್ಪುರದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವಿಮುಕೇಶ್ವರಾನಂದ ಅವರು, ‘ಅಯೋಧ್ಯೆಯ ದೇಣಿಗೆ ಕಳವು ಹಗರಣವು ಒಂದು ಆಕಸ್ಮಿಕವಲ್ಲ, ಅದೊಂದು ಯೋಜಿತ ಕೃತ್ಯವಾಗಿದೆ’ ಎಂದರು.
ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಗೆ ಚಂಪತ್ರಾಯ್ ಅವರ ರಾಜೀನಾಮೆಯು ಕೇವಲ ಒಂದು ‘ಪ್ರದರ್ಶನ’ವೆಂದು ಟೀಕಿಸಿದ ಅವರು, ಚಂಪತ್ರಾಯ್ ಅವರ ರಾಜೀನಾಮೆ ಪತ್ರವನ್ನು ಯಾರೂ ನೋಡಿಲ್ಲ. ಈಗಲೂ ಅವರು ದೇವಾಲಯದ ಆವರಣದಲ್ಲಿ ಕಾರ್ಯನಿರ್ವಹಣೆಯನ್ನು ಮುಂದುವರಿಸಿದ್ದಾರೆ ಎಂದರು.
‘ರಾಜ್ಯ ಸರ್ಕಾರವೇ ರಾಮಮಂದಿರ ಟ್ರಸ್ಟ್ ರಚಿಸಿದೆ ಹಾಗೂ ಅದರ ವಿರುದ್ಧ ತನಿಖೆಗೆ ಎಸ್ಐಟಿಯನ್ನೂ ಸ್ಥಾಪಿಸಿದೆ. ಆಗ ಯಾರು ಯಾರನ್ನು ಶಿಕ್ಷಿಸಲಿದ್ದಾರೆ? ಕೊನೆಗೆ ಅವರೆಲ್ಲರೂ ಕ್ಲೀನ್ಚಿಟ್ ಪಡೆಯಲಿದ್ದಾರೆ’ ಎಂದು ಅವಿಮುಕೇಶ್ವರಾನಂದ ಹೇಳಿದರು.
ತಮಗೆ ಟ್ರಸ್ಟ್ ಮೇಲೆ ನಂಬಿಕೆಯಿಲ್ಲವೆಂದು ಈಗಾಗಲೇ ಹೇಳಿದ್ದೇನೆ. ಹೀಗಾಗಿ ಮುಂದಿನ ಕ್ರಮವನ್ನು ಕೈಗೊಳ್ಳುವುದು ಪೊಲೀಸರಿಗೆ ಸೇರಿದ್ದಾಗಿದೆ ಎಂದರು.