ಅಂಡಮಾನ್: ಸಮುದ್ರದಾಳದಲ್ಲಿ ಪತ್ತೆಯಾಯ್ತು ನೈಸರ್ಗಿಕ ಅನಿಲದ ನಿಕ್ಷೇಪ; ಕೇಂದ್ರ ಸಚಿವ ಹರದೀಪ್ ಪುರಿ ಘೋಷಣೆ!

ಅಂಡಮಾನ್ ಸಮುದ್ರದಲ್ಲಿ ನೈಸರ್ಗಿಕ ಅನಿಲ ಇರುವಿಕೆಯನ್ನು ಆಯಿಲ್ ಇಂಡಿಯಾ ಲಿಮಿಟೆಡ್ ನಡೆಸಿದ ಶೋಧನಾ ಬಾವಿ ಕೊರೆಯುವಿಕೆ ವೇಳೆ ಪತ್ತೆ ಮಾಡಲಾಗಿದೆ. ಇದು ಭಾರತದ ಸಾಗರ ಶೋಧನಾ ಪ್ರಯತ್ನದಲ್ಲಿ ಮಹತ್ವದ ಬೆಳವಣಿಗೆಯಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರದೀಪ್ ಪುರಿ ಪ್ರಕಟಿಸಿದ್ದಾರೆ.
ಶ್ರೀವಿಜಯಪುರಂ-3 ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವುದು ಪತ್ತೆಯಾಗಿದ್ದು, ಇದು ಅಂಡಮಾನ್ ದ್ವೀಪದಿಂದ 15 ಕಿಲೋಮೀಟರ್ ದೂರದಲ್ಲಿ 355 ಮೀಟರ್ ಆಳದಲ್ಲಿ ಇದೆ. ಈಯಸೀನ್ ನಿಕ್ಷೇಪಕ್ಕಾಗಿ ಸುಮಾರು 1,900 ಮೀಟಲ್ವರೆಗೆ ಬಾವಿ ಕೊರೆಯಲಾಗಿದೆ. ಆರಂಭಿಕ ಉತ್ಪಾದನಾ ಪರೀಕ್ಷೆಯಲ್ಲಿ ನಿರಂತರವಾಗಿ ಜ್ವಾಲೆ ಕಂಡುಬಂದಿದ್ದು, ನೈಸರ್ಗಿಕ ಅನಿಲದ ಇರುವಿಕೆಯನ್ನು ಇದು ಸೂಚಿಸುತ್ತದೆ ಎಂದು ವಿವರಿಸಿದ್ದಾರೆ.

“ಅಂಡಮಾನ್ ಸಮುದ್ರದಲ್ಲಿ ಇಂಧನ ಅವಕಾಶಗಳ ಸಾಗರ ದೃಢಪಟ್ಟಿದೆ. ಆಯಲ್ ಇಂಡಿಯಾ ಲಿಮಿಟೆಡ್ ಕೊರೆದ ಶ್ರೀವಿಜಯಪುರಂ-3 ಶೋಧನಾತ್ಮಕ ಬಾವಿಯಲ್ಲಿ ನೈಸರ್ಗಿಕ ಅನಿಲ ಇರುವಿಕೆ ದೃಢಪಟ್ಟಿರುವುದು ಸಂತಸದ ವಿಚಾರ. ಅಂಡಮಾನ್ ದ್ವೀಪದಿಂದ ಪೂರ್ವಕ್ಕೆ 15 ಕಿಲೋಮೀಟರ್ ದೂರದಲ್ಲಿ ನೀರಿನ ಆಳದಲ್ಲಿ 355 ಮೀಟರ್ ಕೊರೆಯಲಾಗಿದೆ. ಆರಂಭಿಕ ಉತ್ಪಾದನಾ ಪರೀಕ್ಷೆಯು 1,900 ಮೀಟರ್ ಆಳದಲ್ಲಿ ನಡೆದಿದ್ದು, ಈಯಸೀನ್ ನಿಕ್ಷೇಪವು ನೈಸರ್ಗಿಕ ಅನಿಲದ ಇರುವಿಕೆಯನ್ನು ದೃಢಪಡಿಸಿದೆ” ಎಂದು ಪುರಿ ಎಕ್ಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಅನಿಲದ ಸಂಯೋಜನೆ ಮತ್ತು ಕ್ಯಾಲೋರಿಫಿಕ್ ಮೌಲ್ಯವನ್ನು ಅಂದಾಜಿಸಲು ಅನಿಲ ಮಾದರಿ ಪರೀಕ್ಷೆಯನ್ನು ಆಯಿಲ್ ಇಂಡಿಯಾ ಲಿಮಿಟೆಡ್ ನಡೆಸುತ್ತಿದೆ. ಜತೆಗೆ ಅನಿಲದ ಮೂಲ ತಿಳಿದುಕೊಳ್ಳುವ ಉದ್ದೇಶದಿಂದ ಐಸೊಟೋಪ್ ಅಧ್ಯಯನ ನಡೆಯುತ್ತಿದೆ ಎಂದು ತಿಳಿದುಬಂದಿದೆ.