ಮಕ್ಕಳ ಬಿಸಿಯೂಟದಲ್ಲಿ ಗೋಲ್‌ಮಾಲ್ ಆರೋಪ: 3 ತಿಂಗಳಿಂದ ಆಹಾರ ಪದಾರ್ಥ ಪೂರೈಕೆ ಸ್ಥಗಿತ!

ಬಿಜಾಪುರ/ಹಾವೇರಿ: ಬಡ ಮಕ್ಕಳ ಹೊಟ್ಟೆ ತುಂಬಲಿ, ಅವರು ಚೆನ್ನಾಗಿ ಓದಲಿ ಅಂತ ಸರ್ಕಾರ ಶಾಲೆಗಳಲ್ಲಿ ಬಿಸಿ ಊಟದ ಯೋಜನೆ ತಂದಿದೆ. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉತ್ತರ ಕರ್ನಾಟಕದ ಎರಡು ಜಿಲ್ಲೆಗಳಲ್ಲಿ (Vijayapura)ಬಿಸಿ ಊಟದ ಯೋಜನೆ ಹಳ್ಳ (Haveri)) ಹಿಡಿದಿದೆ.

ಹಾವೇರಿಯಲ್ಲಿ ಊರಿನವರೇ ಮಕ್ಕಳ ಹಸಿವು ನೀಗಿಸಿದ್ರೆ, ವಿಜಯಪುರದಲ್ಲಿ ಕಳೆದ ಮೂರು ತಿಂಗಳಿಂದ ರೇಷನ್ ಇಲ್ಲದೆ ಮಕ್ಕಳು ಶಾಲೆಯಿಂದಲೇ ದೂರ ಉಳಿಯುವಂತಾಗಿದೆ.
ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಳ್ಳಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ 15 ದಿನಗಳಿಂದ ಬಿಸಿ ಊಟಕ್ಕೆ ಅಕ್ಕಿಯೇ ಇರಲಿಲ್ಲ. 1 ರಿಂದ 8ನೇ ತರಗತಿ ಮಕ್ಕಳಿಗೆ ಅಕ್ಕಿ ಬಂದಿದ್ದರೂ, 9 ಮತ್ತು 10ನೇ ತರಗತಿ ಮಕ್ಕಳಿಗೆ ಅಕ್ಕಿ ಪೂರೈಕೆಯಾಗಿರಲಿಲ್ಲ. ಮಕ್ಕಳು ಹಸಿವಿನಿಂದ ಇರಬಾರದು ಅಂತ ಊರಿನವರೇ ಮುಂದೆ ನಿಂತು, ತಮ್ಮ ಮನೆಗಳಿಂದ ದಿನಾ 50 ಕೆಜಿಯಂತೆ ಅಕ್ಕಿ ತಂದು ಕೊಟ್ಟು ಮಕ್ಕಳ ಹೊಟ್ಟೆ ತುಂಬಿಸಿದ್ದಾರೆ.
ಇತ್ತ ಸುದ್ದಿ ದೊಡ್ಡದಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸವಣೂರು ಬಿಇಒ ಬಾರ್ಕಿ ಅವರು ಶಾಲೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಅಕ್ಕಿ ಕೊರತೆ ಬಗ್ಗೆ ಗಮನಕ್ಕೆ ತರದ ಮುಖ್ಯೋಪಾಧ್ಯಾಯ ಎಫ್.ಸಿ. ಬಾಳಿಕಾಯಿ ಹಾಗೂ ಅಕ್ಷರ ದಾಸೋಹ ಅಧಿಕಾರಿ ಟಿ.ಎಸ್. ಮಡವಳ್ಳಿ ಅವರಿಗೆ ಕಾರಣ ಕೇಳಿ ನೋಟಿಸ್ ಕೊಟ್ಟಿದ್ದಾರೆ. ಸದ್ಯ ಇಲಾಖೆಯಿಂದ ಶಾಲೆಗೆ 4 ಕ್ವಿಂಟಾಲ್ ಅಕ್ಕಿ ಬಂದಿದ್ದು, ಮತ್ತೆ ಬಿಸಿ ಊಟ ಶುರುವಾಗಿದೆ.
ವಿಜಯಪುರದಲ್ಲಿ ಮೂರು ತಿಂಗಳಿಂದ ರೇಷನ್ ಗೋಲ್‌ಮಾಲ್
ಇನ್ನೊಂದೆಡೆ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರ ಕ್ಷೇತ್ರದಲ್ಲೇ ಬಿಸಿ ಊಟಕ್ಕೆ ಕನ್ನ ಬಿದ್ದಿದೆ. ಅರಕೇರಿ ಗ್ರಾಮದ ಕಟಾವಿ ವಸ್ತಿಯ ಅನುದಾನಿತ ಪ್ರಾಥಮಿಕ ಶಾಲೆಗೆ ಕಳೆದ ಮೂರು ತಿಂಗಳಿಂದ ಗೋಧಿ, ಎಣ್ಣೆ, ಹಾಲಿನ ಪೌಡರ್ ಸೇರಿದಂತೆ ಯಾವುದೇ ಪದಾರ್ಥ ಬಂದಿಲ್ಲ. ಇಲ್ಲಿರುವ 12 ಬಡ ಮಕ್ಕಳಿಗೆ ಊಟವಿಲ್ಲದೆ, ಮಕ್ಕಳು ಶಾಲೆಗೆ ಬರೋದನ್ನೇ ನಿಲ್ಲಿಸಿದ್ದಾರೆ
“ನಮ್ಮ ಬಳಿ ಸ್ವಲ್ಪ ಅಕ್ಕಿ ಇದೆ, ಎಣ್ಣೆಯನ್ನ ನಾನೇ ಕೈಯಿಂದ ದುಡ್ಡು ಹಾಕಿ ತರ್ತಿದ್ದೀನಿ” ಅಂತ ಶಾಲೆಯ ಏಕೈಕ ಶಿಕ್ಷಕ ಗೋಪಾಲ್ ರಾಥೋಡ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಆದ್ರೆ ಉಳಿದ ಪದಾರ್ಥಗಳಿಲ್ಲದೆ ಊಟ ಮಾಡೋದಾದ್ರೂ ಹೇಗೆ? ಇರೋ ಅಕ್ಕಿ, ಗೋಧಿಗೂ ಈಗ ಗೆದ್ದಲು ಹಿಡಿದಿದೆ. ಅಡುಗೆಯವರಿಗೆ ಕೆಲಸವಿಲ್ಲದಿದ್ರೂ ಪ್ರತಿ ತಿಂಗಳು ಸಂಬಳ ಮಾತ್ರ ಹೋಗ್ತಿದೆ. ಇದರ ಹಿಂದೆ ದೊಡ್ಡ ಅಕ್ರಮ ನಡೆದಿರೋ ಅನುಮಾನವಿದ್ದು, ತಕ್ಷಣ ತನಿಖೆ ನಡೆಸಬೇಕು ಅಂತ ಸ್ಥಳೀಯರು ಆಗ್ರಹಿಸಿದ್ದಾರೆ