ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆ ಆರೋಪ!

ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಚರ್ಚೆ ಶುರುವಾಗಿದೆ.ಕರ್ನಾಟಕದ ಜನಪ್ರಿಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಬ್ರಾಂಡ್ ನಂದಿನಿ ಇದೀಗ ಮತ್ತೊಂದು ವಿವಾದದ ಕೇಂದ್ರವಾಗಿದೆ. ನಂದಿನಿ ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಮಂಡ್ಯ ಜಿಲ್ಲೆಯ ವ್ಯಕ್ತಿಯೊಬ್ಬರು ಆರೋಪಿಸಿದ್ದು, ಈ ಸಂಬಂಧದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಿಶ್ವೇಶ್ವರ ನಗರದ ನಿವಾಸಿ ಅರುಣ್ ಎಂಬುವವರು ಈ ಆರೋಪ ಮಾಡಿದ್ದಾರೆ. ಮದ್ದೂರಿನ ಬಸ್ ನಿಲ್ದಾಣದ ಸಮೀಪವಿರುವ ನಂದಿನಿ ಬೂತ್ನಲ್ಲಿ ಕಾಲು ಲೀಟರ್ ಮೊಸರಿನ ಪ್ಯಾಕೆಟ್ ಖರೀದಿಸಿ ಮನೆಗೆ ತೆಗೆದುಕೊಂಡು ಹೋಗಿದ್ದಾಗಿ ಅವರು ತಿಳಿಸಿದ್ದಾರೆ.ಮನೆಗೆ ಬಂದ ಬಳಿಕ ಮೊಸರನ್ನು ಬಾಣಲೆಗೆ ಹಾಕಿದಾಗ ಅದರೊಳಗೆ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಅರುಣ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಮೊಸರಿನೊಳಗೆ ಸಿಮ್ ಕಾರ್ಡ್ ಇರುವುದನ್ನು ತೋರಿಸುವ ವಿಡಿಯೋವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದೀಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.ನಂದಿನಿ ಉತ್ಪನ್ನಗಳ ಬಗ್ಗೆ ಹೆಚ್ಚಿದ ಚರ್ಚೆ
ಈ ಹಿಂದೆಯೂ ನಂದಿನಿ ಹಾಲಿನ ಪ್ಯಾಕೆಟ್ನಲ್ಲಿ ಸತ್ತ ಜೇಡ ಪತ್ತೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಇದರ ಬೆನ್ನಲ್ಲೇ ಇದೀಗ ಮೊಸರಿನ ಪ್ಯಾಕೆಟ್ನಲ್ಲಿ ಸಿಮ್ ಕಾರ್ಡ್ ಸಿಕ್ಕಿದೆ ಎನ್ನಲಾದ ವಿಡಿಯೋ ವೈರಲ್ ಆಗಿರುವುದು ನಂದಿನಿ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಕರ್ನಾಟಕ ಹಾಲು ಮಹಾಮಂಡಳಿಯ (ಕೆಎಂಎಫ್) ನಂದಿನಿ ಬ್ರಾಂಡ್ ರಾಜ್ಯದ ಲಕ್ಷಾಂತರ ಗ್ರಾಹಕರ ವಿಶ್ವಾಸ ಗಳಿಸಿದೆ. ಇಂತಹ ಆರೋಪಗಳು ಗ್ರಾಹಕರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿವೆ. ಈ ಪ್ರಕರಣದ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸ್ಪಷ್ಟನೆ ನೀಡಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಒತ್ತಾಯಿಸುತ್ತಿದ್ದಾರೆ. ಆದರೆ, ಮೊಸರಿನೊಳಗೆ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂಬ ಆರೋಪದ ಸತ್ಯಾಸತ್ಯತೆ ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಈ ಕುರಿತು ಕೆಎಂಎಫ್ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಪಷ್ಟನೆ ಬಂದ ಬಳಿಕವಷ್ಟೇ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರಬೇಕಿದೆ.
