ಫೇಸ್‌ಬುಕ್ ಲೈವ್‌ನಲ್ಲೇ ಹೋರಾಟಗಾರನ ಹ*ತ್ಯೆ: ಪಂಜಾಬ್‌ನಲ್ಲಿ ಮೆಡಿಕಲ್ ಮಾಲೀಕನಿಂದ ಶೂಟೌಟ್!

ಚಂಡೀಗಢ: ಪಂಜಾಬ್‌ನ(Punjab) ಮಾನ್ಸಾದಲ್ಲಿ ಮಾದಕ ದ್ರವ್ಯಗಳ ಅಕ್ರಮ ಮಾರಾಟದ ವಿರುದ್ಧ ನಿರಂತರವಾಗಿ ಧ್ವನಿ ಎತ್ತುತ್ತಿದ್ದ ಖ್ಯಾತ ಸಾಮಾಜಿಕ ಹೋರಾಟಗಾರನನ್ನು ಮೆಡಿಕಲ್ ಶಾಪ್ ಮಾಲೀಕನೊಬ್ಬ(Medical Store Owner) ಗುಂಡಿಟ್ಟು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.ಪರ್ವಿಂದರ್ ಸಿಂಗ್ ಝೋಟಾ(Parvinder Singh Jhota) ಹತ್ಯೆಯಾದ ವ್ಯಕ್ತಿ. ಮೆಡಿಕಲ್ ಶಾಪ್‌ನಲ್ಲಿ ನಶೆಯುಂಟು ಮಾಡುವ ಔಷಧಿಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್(Facebook Live) ಮಾಡುತ್ತಿದ್ದಾಗಲೇ ಮಾಲೀಕ ಹತ್ಯೆ ಮಾಡಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ಮೆಡಿಕಲ್ ಶಾಪ್‌ಗಳ ಅಕ್ರಮ ಜಾಲವನ್ನು ಬಯಲಿಗೆಳೆಯುತ್ತಿದ್ದ ಪರ್ವಿಂದರ್ ಸಿಂಗ್ ಝೋಟಾ, ಮಂಗಳವಾರ ಮಾನ್ಸಾದ(Mansa) ಮೆಡಿಕಲ್ ಸ್ಟೋರ್ ಒಂದರ ಮುಂದೆ ನಿಂತು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಲೈವ್ ಆರಂಭಿಸಿದ್ದರು. ಐದು ನಿಮಿಷಗಳ ಈ ವಿಡಿಯೋದಲ್ಲಿ, ಝೋಟಾ ಅವರೊಂದಿಗೆ ವೃದ್ಧರೊಬ್ಬರು ನಿಂತಿದ್ದು, ಅವರು ಈ ಅಂಗಡಿಯಿಂದಲೇ ಮಾದಕ ಔಷಧಿಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ವೇಳೆ ಝೋಟಾ ಹಾಗೂ ಅಂಗಡಿ ಮಾಲೀಕನ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಅಂಗಡಿಯವನು ಕೈಯಲ್ಲಿ ಪಿಸ್ತೂಲ್ ಹಿಡಿದುಕೊಂಡಿರುವುದು ವಿಡಿಯೋದಲ್ಲಿ ಕಂಡುಬಂದಿದ್ದು, ಆತನನ್ನು ಪ್ರಶ್ನಿಸಿದ ಝೋಟಾ, “ಕೈಯಲ್ಲಿ ಪಿಸ್ತೂಲ್ ಏಕೆ ಇಟ್ಟುಕೊಂಡಿದ್ದೀಯಾ? ತಾಕತ್ತಿದ್ದರೆ ನನ್ನನ್ನು ಕೊಲ್ಲು” ಎಂದು ಸವಾಲು ಹಾಕಿದ್ದಾರೆ.