ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ; ಟಿಪ್ಪರ್‌ಗೆ ಥಾರ್ ಡಿಕ್ಕಿಯಾಗಿ ಕೇರಳ ಮೂಲದ ಯುವಕ, ಯುವತಿ ಸಾ*ವು!

ಮಂಡ್ಯ: ಇಲ್ಲಿನ (Mandya) ಇಂಡುವಾಳು ಗ್ರಾಮದ ಬಳಿಯ ಬೆಂಗಳೂರು – ಮೈಸೂರು ಹೈವೆಯಲ್ಲಿ ಟಿಪ್ಪರ್‌ಗೆ ಹಿಂಬದಿಯಿಂದ ಥಾರ್ (Mahindra Thar) ಡಿಕ್ಕಿಯಾಗಿ (Accident) ಕೇರಳ ಮೂಲದ ಯುವತಿ, ಯುವಕ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.

ಕೇರಳ ಮೂಲದ ಲಿಫೈಲ್ ಹಾಗೂ ಮತ್ತೊಬ್ಬ ಯುವತಿ ಸಾವನ್ನಪ್ಪಿದ್ದಾಳೆ. ಬಾಸಿಲ್ ಎಂಬಾತನ ಸ್ಥಿತಿ ಗಂಭೀರವಾಗಿದೆ. ಮೈಸೂರು ಕಡೆಯಿಂದ ಬೆಂಗಳೂರು ಕಡೆಗೆ ಥಾರ್‌ನಲ್ಲಿ ಮೂವರು ತೆರಳುತ್ತಿದ್ದರು. ಈ ವೇಳೆ, ಇಂಡುವಾಳು ಗ್ರಾಮದ ಬಳಿ ಜಲ್ಲಿ ತುಂಬಿದ್ದ ಟಿಪ್ಪರ್‌ಗೆ ಹಿಂಬದಿಯಿಂದ ಥಾರ್ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗಂಭೀರವಾಗಿ ಗಾಯಗೊಂಡ ಯುವಕನಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ವಾಹನಗಳನ್ನು ತೆರವು ಮಾಡಿದ್ದಾರೆ. ಅಪಘಾತದಿಂದ ಈ ಮಾರ್ಗದಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಅಪಘಾತಕ್ಕೆ RTO ಅಧಿಕಾರಿಗಳೇ ಕಾರಣ?
ದುರಂತದ ಬೆನ್ನಲ್ಲೇ ಹೆದ್ದಾರಿಯಲ್ಲಿ ಸಾರ್ವಜನಿಕರ ಆಕ್ರೋಶ ಕಟ್ಟೆಯೊಡೆದಿದೆ. ಈ ಸಾವಿಗೆ ಆರ್‌ಟಿಓ ಅಧಿಕಾರಿಗಳ ಬೇಜವಾಬ್ದಾರಿಯೇ ನೇರ ಕಾರಣ ಎಂಬ ಆರೋಪ ಕೇಳಿಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಇಂಡುವಾಳು ಸಮೀಪದ ಹೆದ್ದಾರಿ ಎಕ್ಸಿಟ್‌ನಲ್ಲಿ ಆರ್‌ಟಿಓ ಅಧಿಕಾರಿಗಳು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಮಿತಿಮೀರಿ ಜಲ್ಲಿ ತುಂಬಿಕೊಂಡು ಮೂರು ಟಿಪ್ಪರ್‌ಗಳು ಬರುತ್ತಿದ್ದವು. ಅಧಿಕಾರಿಗಳು ಕೈತೋರಿಸಿ ತಡೆದಾಗ ಎರಡು ಟಿಪ್ಪರ್‌ಗಳು ನಿಂತಿವೆ, ಆದರೆ ಮತ್ತೊಂದು ಟಿಪ್ಪರ್ ನಿಲ್ಲಿಸದೆ ವೇಗವಾಗಿ ಮುನ್ನುಗ್ಗಿದೆ. ಇದರಿಂದ ಕೆರಳಿದ ಆರ್‌ಟಿಓ ಅಧಿಕಾರಿಗಳು ತಮ್ಮ ವಾಹನದಲ್ಲಿ ಹೆದ್ದಾರಿಯಲ್ಲೇ ಟಿಪ್ಪರ್ ಬೆನ್ನಟ್ಟಿ ಹೋಗಿದ್ದಾರೆ. ಮುಂದೆ ಹೋಗಿ ಏಕಾಏಕಿ ಟಿಪ್ಪರ್‌ಗೆ ಅಡ್ಡಲಾಗಿ ಗಾಡಿ ಹಾಕಿ ನಿಲ್ಲಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಆರ್‌ಟಿಓ ವಾಹನ ಅಡ್ಡಬರುತ್ತಿದ್ದಂತೆ ಗಾಬರಿಗೊಂಡ ಟಿಪ್ಪರ್ ಚಾಲಕ ಹೆದ್ದಾರಿ ನಡುವೆಯೇ ಏಕಾಏಕಿ ಬ್ರೇಕ್ ತುಳಿದಿದ್ದಾನೆ. ವೇಗದ ಕಾರಿಡಾರ್‌ನಲ್ಲಿ ಮುನ್ಸೂಚನೆಯೇ ಇಲ್ಲದೆ ಟಿಪ್ಪರ್ ದಿಢೀರ್ ನಿಂತಿದ್ದರಿಂದ, ಹಿಂದಿನಿಂದ ಬರುತ್ತಿದ್ದ ಥಾರ್ ಚಾಲಕನಿಗೆ ವಾಹನ ನಿಯಂತ್ರಿಸಲು ಸಾಧ್ಯವಾಗದೆ ನೇರವಾಗಿ ಟಿಪ್ಪರ್‌ಗೆ ಗುದ್ದಿಸಿದ್ದಾನೆ. ನಿಯಮದ ಪ್ರಕಾರ ಎಕ್ಸ್‌ಪ್ರೆಸ್‌ವೇಗಳಲ್ಲಿ ವಾಹನಗಳನ್ನು ಈ ರೀತಿ ಬೆನ್ನಟ್ಟಿ, ಹಠಾತ್ತಾಗಿ ರಸ್ತೆ ಮಧ್ಯೆ ನಿಲ್ಲಿಸುವುದು ಅತ್ಯಂತ ಅಪಾಯಕಾರಿ. ಆದರೂ ಅಧಿಕಾರಿಗಳು ಈ ಹುಚ್ಚು ಸಾಹಸಕ್ಕೆ ಕೈಹಾಕಿ ಇಬ್ಬರ ಪ್ರಾಣ ಬಲಿಪಡೆದರಾ ಎಂಬ ಪ್ರಶ್ನೆ ಉದ್ಭವಿಸಿದೆ. ಘಟನೆ ಸಂಬಂಧ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಒಟ್ಟಾರೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಕೇವಲ ವಾಹನಗಳ ವೇಗಕ್ಕೆ ಮಾತ್ರವಲ್ಲ, ಅಧಿಕಾರಿಗಳ ಅಜಾಗರೂಕತೆಗೂ ಬಲಿಯಾಗುತ್ತಿದೆಯಾ ಅನ್ನೋ ಆತಂಕ ಸಾರ್ವಜನಿಕರಲ್ಲಿ ಮೂಡಿದೆ.