ಹಾರಂಗಿ ಹಿನ್ನೀರಿನಲ್ಲಿ ದುರಂತ ಅಂತ್ಯ: ಎರಡು ದಿನಗಳ ಬಳಿಕ ಯುವಕನ ಮೃತದೇಹ ಪತ್ತೆ

ಮಡಿಕೇರಿ: ಕೊಡಗು (Kodagu) ಜಿಲ್ಲೆಯ ಕುಶಾಲನಗರ (Kushalnagar) ಸಮೀಪದ ಹೇರೂರು ಗ್ರಾಮದ ಹಾರಂಗಿ (Harangi) ಹಿನ್ನೀರಿನಲ್ಲಿ ಎರಡು ದಿನಗಳ ಹಿಂದೆ ನೀರಿನಲ್ಲಿ ಕಣ್ಮರೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ.ಹೇರೂರು ಹಾಡಿ ನಿವಾಸಿ ವಿನೋದ್ (27) ಮೃತ ದುರ್ದೈವಿ. ನೀರುಕಾಗೆ ಹಿಡಿಯಲು ಹಾರಂಗಿ ಹಿನ್ನೀರಿಗೆ ಇಳಿದಿದ್ದ ವೇಳೆ ಕಾಲು ಜಾರಿ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದ ವಿನೋದ್‌ಗಾಗಿ ಕಳೆದ ಎರಡು ದಿನಗಳಿಂದ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ನಿರಂತರ ಶೋಧ ಕಾರ್ಯಾಚರಣೆ ನಡೆಸಿದ್ದರು. ಇದೀಗ ಹಾರಂಗಿ ಹಿನ್ನೀರಿನಲ್ಲಿ ವಿನೋದ್‌ನ ಮೃತದೇಹ ತಾನಾಗಿಯೇ ನೀರಿನ ಮೇಲ್ಮೈಗೆ ಬಂದಿದೆ. ತಕ್ಷಣ ಸ್ಥಳೀಯರು ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ. ಎರಡು ದಿನಗಳ ನಿರಂತರ ಕಾರ್ಯಾಚರಣೆಯ ಬಳಿಕ ಮೃತದೇಹ ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಸುಂಟಿಕೊಪ್ಪ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
