ಕೆಲಸದ ಬಾಕಿ ಹಣದ ವಿಚಾರಕ್ಕೆ ಭೀಕರ ಕೊಲೆ: ನಾಲ್ಕು ವರ್ಷಗಳ ಬಳಿಕ ಆರೋಪಿಗೆ ಜೀವಾವಧಿ ಶಿಕ್ಷೆ

ಮಂಗಳೂರು : ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಗಾಂಧಿನಗರದ ಮಲ್ಲಿ ಲೇಔಟ್‌ನಲ್ಲಿ 2020ರಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿ ಸಂತು ಅಲಿಯಾಸ್ ಸಂತೋಷ್ ಎಂಬಾತನಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ₹32,000 ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಮಲ್ಲಿ ಲೇಔಟ್ ನಿವಾಸಿ ಸುರೇಂದ್ರನ್ ಕೊಲೆಯಾದ ದುರ್ದೈವಿ. ಪ್ರಕರಣದ ಇನ್ನೋರ್ವ ಆರೋಪಿ ಸಿದ್ದು ಅಲಿಯಾಸ್ ಸಿದ್ದಪ್ಪನನ್ನು ನ್ಯಾಯಾಲಯ ನಿರ್ದೋಷಿ ಎಂದು ಖುಲಾಸೆಗೊಳಿಸಿದೆ.

ಕೆಲಸ ಮಾಡಿದ್ದಕ್ಕೆ ಬಾಕಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಸಂತು ಅಲಿಯಾಸ್ ಸಂತೋಷ್ ಹಾಗೂ ಸಿದ್ದು ಅಲಿಯಾಸ್ ಸಿದ್ದಪ್ಪ 2020ರ ನವೆಂಬರ್ 3ರಂದು ಹಣ ಕೇಳಲೆಂದು ಸುರೇಂದ್ರನ್ ಅವರ ಮನೆಗೆ ತೆರಳಿದ್ದರು. ಸಿದ್ದಪ್ಪನ ಸೂಚನೆಯಂತೆ ಮನೆಯ ಒಳಗೆ ಹೋದ ಸಂತೋಷ್, ಸುರೇಂದ್ರನ್ ಅವರ ಬಳಿ ಹಣ ಕೇಳಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿದೆ.
ಆಕ್ರೋಶಗೊಂಡ ಸಂತೋಷ್, ಸುರೇಂದ್ರನ್ ಅವರ ಕುತ್ತಿಗೆ, ಮುಖ ಹಾಗೂ ತಲೆಯ ಭಾಗಕ್ಕೆ ಬ್ಲೇಡಿನಿಂದ ಕೊಯ್ದಿದ್ದಲ್ಲದೆ, ಕಬ್ಬಿಣದ ರಾಡ್‌ನಿಂದ ತಲೆಗೆ ಬಲವಾಗಿ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದನು.
ಘಟನೆ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ನಿರೀಕ್ಷಕ ರಾಘವ್ ಪಡೀಲ್ ಅವರು ಪ್ರಕರಣದ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಸಾಕ್ಷಿದಾರರ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ವಿ.ಎನ್. ಅವರು ಸಂತು ಅಲಿಯಾಸ್ ಸಂತೋಷ್ ದೋಷಿ ಎಂದು ತೀರ್ಮಾನಿಸಿ ಶಿಕ್ಷೆ ಪ್ರಕಟಿಸಿದ್ದಾರೆ.
ಕಲಂ 302 (ಕೊಲೆ): ಜೀವಾವಧಿ ಶಿಕ್ಷೆ ಹಾಗೂ ₹25,000 ದಂಡ (ದಂಡ ಪಾವತಿಸಲು ತಪ್ಪಿದಲ್ಲಿ ಹೆಚ್ಚುವರಿ 1 ವರ್ಷ ಜೈಲು ಶಿಕ್ಷೆ).
ಕಲಂ 392 (ಸುಲಿಗೆ): 2 ವರ್ಷಗಳ ಜೈಲು ಶಿಕ್ಷೆ ಹಾಗೂ ₹5,000 ದಂಡ (ದಂಡ ತಪ್ಪಿದಲ್ಲಿ 1 ತಿಂಗಳ ಹೆಚ್ಚುವರಿ ಶಿಕ್ಷೆ).
ಕಲಂ 201 (ಸಾಕ್ಷ್ಯ ನಾಶ): 6 ತಿಂಗಳ ಜೈಲು ಶಿಕ್ಷೆ ಹಾಗೂ ₹2,000 ದಂಡ (ದಂಡ ತಪ್ಪಿದಲ್ಲಿ 15 ದಿನಗಳ ಹೆಚ್ಚುವರಿ ಶಿಕ್ಷೆ).
ಒಟ್ಟು ₹32,000 ದಂಡದ ಮೊತ್ತದಲ್ಲಿ ₹7,000 ಸರ್ಕಾರಕ್ಕೆ ಜಮಾ ಮಾಡಬೇಕು ಹಾಗೂ ಉಳಿದ ₹25,000 ಹಣವನ್ನು ಕೊಲೆಯಾದ ಸುರೇಂದ್ರನ್ ಅವರ ಪತ್ನಿಗೆ ಪರಿಹಾರವಾಗಿ ನೀಡಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಜ್ಯೋತಿ ಪ್ರಮೋದ್ ನಾಯಕ ಸಮರ್ಥವಾಗಿ ವಾದ ಮಂಡಿಸಿದ್ದರು.