ದಕ್ಷಿಣ ಆಫ್ರಿಕಾದಲ್ಲಿ ರಕ್ತಪಾತ: ಎರಡು ಗುಂಡಿನ ದಾಳಿಗಳಲ್ಲಿ 17 ಮಂದಿ ಸಾ*ವು!

ಕೇಪ್ ಟೌನ್: ದಕ್ಷಿಣ ಆಫ್ರಿಕಾದಲ್ಲಿ (South Africa) ನಡೆದ ಎರಡು ಪ್ರತ್ಯೇಕ ಸಾಮೂಹಿಕ ಗುಂಡಿನ ದಾಳಿಗಳಲ್ಲಿ 17 ಮಂದಿ ಮೃತಪಟ್ಟಿದ್ದು, ಈ ಎರಡೂ ಘಟನೆಗಳಿಗೆ ಕಳೆದ ವರ್ಷ ಸಾಲ್ಸ್‌ವಿಲ್ಲೆ (Saulsville) ಯಲ್ಲಿ ನಡೆದ ಹತ್ಯೆಗಳೊಂದಿಗೆ ನಂಟು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸೋಮವಾರ (ನ.16) ಮುಂಜಾನೆ ಪೀಟರ್‌ಮಾರಿಟ್ಜ್‌ಬರ್ಗ್ (Pietermaritzburg) ನಗರದ ಹೊರವಲಯದ ಸ್ವೀಟ್‌ವಾಟರ್ಸ್ ಎಂಬಲ್ಲಿ ಮೊದಲ ಗುಂಡಿನ ದಾಳಿ ನಡೆದಿದೆ. ದಾಳಿಗೆ ತುತ್ತಾಗಿದ್ದ ವಾಹನವೊಂದರ ಒಳಗೆ 8 ಮಂದಿಯ ಶವಗಳು ಪತ್ತೆಯಾಗಿವೆ. ಮೃತರೆಲ್ಲರೂ 20 ರಿಂದ 30 ವರ್ಷ ವಯಸ್ಸಿನವರು ಎಂದು ತಿಳಿದುಬಂದಿದೆ.ಇದಾದ ಬಳಿಕ, ರಾಜಧಾನಿ ಪ್ರಿಟೋರಿಯಾ ಹೊರವಲಯದ ಕೊಳೆಗೇರಿ ಪ್ರದೇಶದ ನಾಲ್ಕು ಕೋಣೆಗಳ ಶೆಡ್ ಒಂದರಲ್ಲಿ ಗುಂಡೇಟಿನ ಗಾಯಗಳೊಂದಿಗೆ 9 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ಮೃತರಲ್ಲಿ ಆರು ಮಂದಿ ಪುರುಷರು ಹಾಗೂ ಮೂವರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷ ಸಮೀಪದ ಸಾಲ್ಸ್‌ವಿಲ್ಲೆ ಕೊಳೆಗೇರಿ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಗೆ ಇವುಗಳ ನಂಟು ಇರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆ ಘಟನೆಯಲ್ಲಿ 12 ಮಂದಿ ಮೃತಪಟ್ಟು, 13 ಜನರು ಗಾಯಗೊಂಡಿದ್ದರು. ಮಾಧ್ಯಮಗಳಿಗೆ ಮಾಹಿತಿ ನೀಡಿದ ಗೌಟೆಂಗ್ ಪೊಲೀಸ್ ಆಯುಕ್ತ ಟಾಮಿ ಎಂಥೊಂಬೆನಿ, `ಮೃತರಲ್ಲಿ ಒಬ್ಬನು ಕಳೆದ ವರ್ಷದ ಸಾಲ್ಸ್‌ವಿಲ್ಲೆ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಶಂಕಿತ ಆರೋಪಿಯಾಗಿದ್ದ. ಹೀಗಾಗಿ ಹಳೆಯ ಪ್ರಕರಣದ ನಂಟು ಇರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬಹುಶಃ ಇದೊಂದು ಪ್ರತೀಕಾರದ ದಾಳಿಯಾಗಿರಬಹುದು ಎಂದು ಹೇಳಿದ್ದಾರೆ.