ಬ್ರಿಟಿಷ್ ಸಂಸತ್ತಿನಲ್ಲಿ ಹೊಸ ಇತಿಹಾಸ: ದೀಪಾವಳಿ ಆಚರಣೆ ವೇಳೆ ಹನುಮಾನ್ ಚಾಲೀಸಾ ಪಠಣ

ಲಂಡನ್: ಬ್ರಿಟಿಷ್ ಸಂಸತ್ತಿನ ಮೇಲ್ಮನೆಯಾದ ‘ಹೌಸ್ ಆಫ್ ಲಾರ್ಡ್ಸ್’ನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಪವಿತ್ರ ಹನುಮಾನ್ ಚಾಲೀಸಾವನ್ನು ಪಠಿಸಲಾಗಿದೆ. ಬ್ರಿಟಿಷ್ ಸಂಸತ್ತು ಈ ಅಪರೂಪದ ಹಾಗೂ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ನವೆಂಬರ್ 9 ರಂದು ಲೇಬರ್ ಏಷ್ಯನ್ಸ್ ಸೊಸೈಟಿ ಆಯೋಜಿಸಿದ್ದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಯುನೈಟೆಡ್ ಕಿಂಗ್‌ಡಂನ ಹೌಸ್ ಆಫ್ ಲಾರ್ಡ್ಸ್‌ನಲ್ಲಿ ಮೊದಲ ಬಾರಿಗೆ ಹನುಮಾನ್ ಚಾಲೀಸಾವನ್ನು ಪಠಿಸಲಾಯಿತು.
ವೆಸ್ಟ್‌ಮಿನಿಸ್ಟರ್ ಅರಮನೆಯ ಚೋಲ್ಮೊಂಡೆಲಿ ಕೊಠಡಿ ಮತ್ತು ಟೆರೇಸ್‌ನಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸಂಸದರು, ಸಮುದಾಯದ ಮುಖಂಡರು ಮತ್ತು ಬ್ರಿಟಿಷ್ ಏಷ್ಯನ್ ಸಮುದಾಯದ ಸದಸ್ಯರು ಭಾಗವಹಿಸಿದ್ದರು.
‘ಹಿಯರ್ ಅಂಡ್ ನೌ 365’ (Here & Now 365) ಸಂಸ್ಥೆಯ ಸಂಸ್ಥಾಪಕ ಮನೀಶ್ ತಿವಾರಿ ಅವರು ಆಚರಣೆಯ ನೇತೃತ್ವ ವಹಿಸಿದ್ದರೆ, ಲೇಬರ್ ಏಷ್ಯನ್ಸ್ ಸೊಸೈಟಿಯ ಪೋಷಕರಾದ ಲಾರ್ಡ್ ಉದಯ್ ನಾಗರಾಜು (Lord Uday Nagaraju) ಅವರು ಕಾರ್ಯಕ್ರಮದ ಆತಿಥ್ಯ ವಹಿಸಿದ್ದರು.
ತಬಲಾ ಮತ್ತು ಹಾರ್ಮೋನಿಯಂ ವಾದ್ಯಗಳೊಂದಿಗೆ ಹನುಮಾನ್ ಚಾಲೀಸಾವನ್ನು ಅತ್ಯಂತ ಭಕ್ತಿಯಿಂದ ಹಾಡಲಾಯಿತು. ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯ ಮೂಲದವರು ಮಾತ್ರವಲ್ಲದೆ, ಹಲವಾರು ಬ್ರಿಟಿಷ್ ಸಂಸತ್ ಸದಸ್ಯರು ಹಾಗೂ ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು