ದೀಪಾವಳಿ ಸಂಭ್ರಮಕ್ಕೆ ರೈತನ ಬದುಕಿಗೆ ಕತ್ತಲು: ಆಕಾಶಬುಟ್ಟಿಯಿಂದ ಕಬ್ಬಿನ ಗದ್ದೆಗೆ ಬೆಂಕಿ!

ಹುಬ್ಬಳ್ಳಿ: ದೇಶದೆಲ್ಲಡೆ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬೆಳಕಿನ ಹಬ್ಬ ಅನೇಕರ ಬಾಳಲ್ಲಿ ಹೊಸಬೆಳಕು ಮೂಡಿಸಿದ್ದರೆ, ಇನ್ನು ಕೆಲವರ ಬಾಳಿಗೆ ಕತ್ತಲು ಆವರಿಸುವಂತೆ ಮಾಡಿದೆ. ಸಂಭ್ರಮಕ್ಕಾಗಿ ಆಕಾಶದಲ್ಲಿ ಹಾರಿ ಬಿಡುವ ಆಕಾಶ ದೀಪ (ಆಕಾಶಬುಟ್ಟಿ)ಯಿಂದ ಕಟಾವಿಗೆ ಬಂದಿದ್ದ 7 ಎಕರೆ ಕಬ್ಬು ಸುಟ್ಟು ಹೋಗಿದೆ. ಈ ಅವಘಡದಿಂದ ರೈತನಿಗೆ ಬರಸಿಡಿಲು ಬಡಿದಂತಾಗಿದೆ. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲೂಕಿನ ತಿಮ್ಮಸಾಗರ ಗ್ರಾಮದಲ್ಲಿ ಘಟನೆ ನಡೆದಿದೆ.

ನಡೆದಿದ್ದೇನು?
ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹತ್ತಿ ಕಬ್ಬು ಸುಡುವುದು, ದುಷ್ಕರ್ಮಿಗಳ ಅಟ್ಟಹಾಸಕ್ಕೆ ಕಬ್ಬು ಬೆಳೆ ಹಾಳಾಗಿರುವ ಅನೇಕ ಘಟನೆಗಳು ನಡೆದಿವೆ. ಆದರೆ ತಿಮ್ಮಸಾಗರ ಗ್ರಾಮದ ರೈತ ಶಂಕರಲಿಂಗ ಅವರ ಹೊಲದಲ್ಲಿ ಕಬ್ಬು ಸುಡಲು ಕಾರಣವಾಗಿದ್ದು ದೀಪಾವಳಿ ಹಬ್ಬ.ಹೌದು.. ದೀಪಾವಳಿ ಹಬ್ಬವನ್ನು ಎಲ್ಲಡೆ ಸಂಭ್ರಮದಿಂದ ಆಚರಿಸಲಾಗಿದೆ. ಅನೇಕರು ದೀಪಗಳನ್ನು ಹಚ್ಚಿ ಹಬ್ಬ ಮಾಡಿದರೆ, ಅನೇಕರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಇನ್ನು ಕೆಲವರು ಮುಂದೆ ಹೋಗಿ ಆಕಾಶದಲ್ಲಿ ಸ್ಕೈ ಲ್ಯಾಂಟರ್ನ್ ಅಂದರೆ ಆಕಾಶ ಬುಟ್ಟಿ ಹಾರಿ ಬಿಡುವ ಮೂಲಕ ಸಂಭ್ರಮಿಸಿದ್ದಾರೆ. ಹೀಗೆ ಹುಬ್ಬಳ್ಳಿಯಲ್ಲಿ ಬಿಟ್ಟ ಆಕಾಶ ಬುಟ್ಟಿ, ರೈತ ಶಂಕರಲಿಂಗ ಅವರ ಕಬ್ಬಿನ ಹೊಲದಲ್ಲಿ ಕಳೆದ ರಾತ್ರಿ ಬಂದು ಬಿದ್ದಿದೆ. ಆಕಾಶ ಬುಟ್ಟಿಯಲ್ಲಿದ್ದ ದೀಪದಿಂದ ಕಬ್ಬಿನ ಗದ್ದೆಗೆ ಬೆಂಕಿ ಹೊತ್ತಿಕೊಂಡಿದೆ. ನೋಡನೋಡುತ್ತಿದ್ದಂತೆ, ಎಲ್ಲಡೆ ಆವರಿಸಿಕೊಂಡಿದೆ.
ನಾಲ್ಕೈದು ಎಕರೆ ಕಬ್ಬು ಸುಟ್ಟು ಭಸ್ಮ
ಬೆಂಕಿ ಬಿದ್ದಿರುವುದನ್ನು ನೋಡಿದ ರೈತ, ಜಮೀನಿಗೆ ಓಡಿ ಬಂದು ಬೆಂಕಿ ನಂದಿಸಲು ಸಾಕಷ್ಟು ಹರಸಾಹಸ ಪಟ್ಟಿದ್ದಾರೆ. ಗ್ರಾಮಸ್ಥರು ಕೂಡ ಸಾಥ ನೀಡಿದ್ದಾರೆ. ಮತ್ತೊಂದಡೆ ಅಗ್ನಿಶಾಮಕ ಸಿಬ್ಬಂದಿ ಕೂಡ ಆಗಮಸಿದ್ದಾರೆ. ಆದರೆ ಬೆಂಕಿ ನಂದಿಸುವಷ್ಟರಲ್ಲಿ ನಾಲ್ಕೈದು ಎಕರೆಯಲ್ಲಿದ್ದ ಕಬ್ಬು ಸುಟ್ಟು ಹೋಗಿದೆ.ಶಂಕರಲಿಂಗ ಅವರು ಸಾವಿರಾರು ರೂ ಖರ್ಚು ಮಾಡಿ ಕಬ್ಬು ಬೆಳದಿದ್ದರು. ದೀಪಾವಳಿ ಹಬ್ಬ ಮುಗಿದ ತಕ್ಷಣವೇ ಕಟಾವು ಮಾಡಲು ಸಿದ್ಧತೆ ನಡೆಸಿದ್ದರು. ಆ ಮೂಲಕ ಲಕ್ಷಾಂತರ ರೂ ಆದಾಯದ ನಿರೀಕ್ಷೆಯಲ್ಲಿದ್ದರು. ಬರಗಾಲದಲ್ಲಿ ಕೂಡ ಸಾಕಷ್ಟು ಶ್ರಮವಹಿಸಿ ಕಬ್ಬು ಬೆಳದಿದ್ದ ರೈತನಿಗೆ ಕಳೆದ ರಾತ್ರಿ ಆಕಾಶ ಬುಟ್ಟಿ ದೊಡ್ಡ ಶಾಕ್ ನೀಡಿದೆ.
ಆಕಾಶ ಬುಟ್ಟಿಗಳನ್ನ ಬಿಡದಂತೆ ಮನವಿ
ಇನ್ನು ಈ ರೀತಿಯ ಘಟನೆ ಹುಬ್ಬಳ್ಳಿ ಸುತ್ತಮುತ್ತ ನಡೆಯುತ್ತಿರುವುದು ಮೊದಲೇನಲ್ಲ. ಈ ಹಿಂದೆ ಕೂಡ ಹುಬ್ಬಳ್ಳಿಯ ಅನೇಕರು ಹಾರಿ ಬಿಡುವ ಆಕಾಶಬುಟ್ಟಿಗಳು ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಬಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಉಂಟಾಗಿದೆ. ಯಾರು ಆಕಾಶ ಬುಟ್ಟಿ ಬಿಟ್ಟಿದ್ದು ಅಂತ ಯಾರಿಗೂ ಗೊತ್ತಾಗುವುದಿಲ್ಲ. ಒಂದೆಡೆ ಆಕಾಶ ಬುಟ್ಟಿ ಬಿಟ್ಟವರು ಸಂತೋಷ ಪಟ್ಟರೆ, ಅವು ರೈತರ ಜಮೀನಿಗೆ ಬಿದ್ದಾಗ ಹೊತ್ತಿಕೊಳ್ಳುವ ಬೆಂಕಿಯಿಂದ ರೈತರು ಅಪಾರ ಪ್ರಮಾಣದ ಬೆಳೆ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ದಯವಿಟ್ಟು ಆಕಾಶ ಬುಟ್ಟಿಗಳನ್ನು ಬಿಡಬೇಡಿ ಅಂತ ರೈತರು ಮನವಿ ಮಾಡುತ್ತಿದ್ದಾರೆ.ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಿಕ್ಕೆ ಅನೇಕ ದಾರಿಗಳಿವೆ. ಆದರೆ ಕೆಲವರು ಇನ್ನೊಬ್ಬರ ಆಸ್ತಿ-ಪಾಸ್ತಿಗೆ ಹಾನಿ ಮಾಡುವ ಆಕಾಶ ಬುಟ್ಟಿಗಳನ್ನು ಬಿಟ್ಟು ಸಂಭ್ರಮಪಟ್ಟು, ಮತ್ತೊಬ್ಬರ ಬಾಳಿಗೆ ಕತ್ತಲು ತರುವಂತೆ ಮಾಡುತ್ತಿರುವುದು ಮಾತ್ರ ದುರ್ದೈವದ ಸಂಗತಿ.