Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿನಿ ಮೇಲೆ ಸಹಪಾಠಿಯಿಂದ ಚಾಕು ದಾಳಿ

Spread the love

ಬಾಂಗ್ಲಾದೇಶ: ಬೆಚ್ಚಿಬೀಳಿಸುವ ಹಿಂಸಾತ್ಮಕ ಘಟನೆಯೊಂದರಲ್ಲಿ, ಬಾಂಗ್ಲಾದೇಶದ ಕುಷ್ಟಿಯಾ ಜಿಲ್ಲೆಯ ಥಾನಾಪಾರಾ ಪ್ರದೇಶದಲ್ಲಿ ನವೆಂಬರ್ 9ರ ಸೋಮವಾರ ಹಾಡಹಗಲೇ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳಿಗೆ ಆಕೆಯ ಸಹಪಾಠಿ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ, ಅದರಲ್ಲೂ ವಿಶೇಷವಾಗಿ ಎಕ್ಸ್‌ (ಹಿಂದಿನ ಟ್ವಿಟರ್‌)ನಲ್ಲಿ ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ, ಮನೆಯೊಂದರ ಹೊರಗೆ ನಿಂತು ಬಾಗಿಲಿನ ಬೆಲ್ ಒತ್ತುತ್ತಿದ್ದ ವಿದ್ಯಾರ್ಥಿನಿಯ ಹಿಂದಿನಿಂದ ಬಂದ ಬಾಲಕನೊಬ್ಬ ಏಕಾಏಕಿ ದಾಳಿ ಮಾಡಿರುವುದು ಕಂಡುಬಂದಿದೆ. ಕೈಯಲ್ಲಿ ಹರಿತವಾದ ಚಾಕು ಹಿಡಿದು ಬಂದ ಆರೋಪಿ, ವಿದ್ಯಾರ್ಥಿನಿಗೆ ಪದೇಪದೇ ಇರಿದು ಗಂಭೀರವಾಗಿ ಗಾಯಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಆಕೆಯ ಕಿರುಚಾಟ ಕೇಳಿ ಸ್ಥಳೀಯರು ಧಾವಿಸಿ ಬಂದು ಆಕೆಯ ನೆರವಿಗೆ ಮುಂದಾಗಿದ್ದಾರೆ.

ಶಾಲೆಯಲ್ಲಿ ಪರೀಕ್ಷೆ ಬರೆದು ಮನೆಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ದಾಳಿಯಿಂದ ವಿದ್ಯಾರ್ಥಿನಿಯ ಹೊಟ್ಟೆ, ಬೆನ್ನು ಹಾಗೂ ಕೈಗಳಿಗೆ ಹಲವು ಗಾಯಗಳಾಗಿವೆ. ತಕ್ಷಣ ಆಕೆಯನ್ನು ಕುಷ್ಟಿಯಾದ 250 ಹಾಸಿಗೆಗಳ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಗಾಯಗಳಿಗೆ ಹೊಲಿಗೆ ಹಾಕಿ ನಿಗಾ ವಹಿಸಿದ್ದಾರೆ. ಸದ್ಯ ಆಕೆಯ ಆರೋಗ್ಯ ಸ್ಥಿರವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.

ಸಹಪಾಠಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದಿದ್ದೇಕೆ?

ಸಂತ್ರಸ್ತ ವಿದ್ಯಾರ್ಥಿನಿಯನ್ನು ಕುಷ್ಟಿಯಾ ಕಲೆಕ್ಟರೇಟ್ ಸ್ಕೂಲ್ ಆ್ಯಂಡ್ ಕಾಲೇಜಿನಲ್ಲಿ 10ನೇ ತರಗತಿ ಓದುತ್ತಿರುವ ಜಾಕಿಯಾ ಎಂದು ಗುರುತಿಸಲಾಗಿದೆ. ಆರೋಪಿ ವಿದ್ಯಾರ್ಥಿ ದೀರ್ಘಕಾಲದಿಂದ ಆಕೆಯನ್ನು ಹಿಂಬಾಲಿಸುತ್ತಾ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಜಾಕಿಯಾ ಮತ್ತು ಆಕೆಯ ಕುಟುಂಬದವರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿ, ಕಿರುಕುಳ ನಿಲ್ಲಿಸುವಂತೆ ಎಚ್ಚರಿಕೆ ನೀಡಿದ್ದರು.

ಆದರೆ, ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರು ಆತನನ್ನು ಪ್ರಶ್ನಿಸಿ ಕಿರುಕುಳ ನಿಲ್ಲಿಸುವಂತೆ ಒತ್ತಾಯಿಸಿದ್ದರಿಂದ ಆರೋಪಿ ಆಕ್ರೋಶಗೊಂಡಿದ್ದ ಎನ್ನಲಾಗಿದೆ. ಇದೇ ದ್ವೇಷದಿಂದ ಪರೀಕ್ಷೆ ಮುಗಿಸಿ ಮನೆಗೆ ಮರಳುತ್ತಿದ್ದ ಆಕೆಯ ಮೇಲೆ ದಾಳಿ ನಡೆಸಲು ಮನೆಯ ಹೊರಗೆ ಕಾಯುತ್ತಿದ್ದ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಸಂತ್ರಸ್ತೆಯ ಮನೆಯ ಸಮೀಪ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದೆ. ಕಪ್ಪು ಬಟ್ಟೆ ಧರಿಸಿದ್ದ ಆರೋಪಿ, ವಿದ್ಯಾರ್ಥಿನಿಯ ಹಿಂದಿನಿಂದ ಬಂದು ದಿಢೀರನೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಕೆಲವೇ ಸೆಕೆಂಡುಗಳಲ್ಲಿ ಪದೇಪದೇ ಇರಿದ ಬಳಿಕ ಚಾಕುವನ್ನು ಕೆಳಗೆ ಬೀಳಿಸಿ ಸ್ಥಳದಿಂದ ಪರಾರಿಯಾಗಿರುವುದು ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ದಾಳಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ವೇಳೆ ವಿದ್ಯಾರ್ಥಿನಿಯ ಹೊಟ್ಟೆ, ಬೆನ್ನು ಮತ್ತು ಕೈಗಳಿಗೆ ಗಾಯಗಳಾಗಿವೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದ್ದು, ವೈದ್ಯರು ಗಾಯಗಳಿಗೆ ಹೊಲಿಗೆ ಹಾಕಿ ನಿಗಾದಲ್ಲಿರಿಸಿದ್ದಾರೆ. ಆಕೆಯ ಆರೋಗ್ಯ ಸ್ಥಿರವಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.

12 ಗಂಟೆಯೊಳಗೆ ಆರೋಪಿಯ ಬಂಧನ

ಚಾಕು ಇರಿತದ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲ್ಲೇ ಕುಷ್ಟಿಯಾ ಮಾಡೆಲ್ ಪೊಲೀಸ್ ಠಾಣೆಯ ಪೊಲೀಸರು ತ್ವರಿತ ತನಿಖೆ ಆರಂಭಿಸಿದ್ದಾರೆ. ವಿವಿಧ ಪ್ರದೇಶಗಳಲ್ಲಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಪೊಲೀಸರು, ಘಟನೆ ನಡೆದ ಕೇವಲ 12 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕುಷ್ಟಿಯಾ ಸದರ್ ಉಪಜಿಲ್ಲೆಯ ಪಾಟಿಕಾಬಾರಿ ಪ್ರದೇಶದಲ್ಲಿ ಅಡಗಿಕೊಂಡಿದ್ದ ಅಪ್ರಾಪ್ತ ವಯಸ್ಸಿನ ಆರೋಪಿಯನ್ನು ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.

ಹಲ್ಲೆಗೆ ಬಳಸಿದ್ದ ಚಾಕುವನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಂಗ್ಲಾದೇಶದ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದ್ದು, ತನಿಖೆ ಮುಂದುವರಿದಿದೆ.

ದಾಳಿಯ ಬಳಿಕ ಆರೋಪಿ ಪರಾರಿಯಾಗಲು ಅಥವಾ ಪಾಟಿಕಾಬಾರಿ ಪ್ರದೇಶದಲ್ಲಿ ಅಡಗಿಕೊಳ್ಳಲು ಬೇರಾರಾದರೂ ಸಹಾಯ ಮಾಡಿದ್ದಾರೆಯೇ ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ಸ್ಥಳೀಯ ವರದಿಗಳು ತಿಳಿಸಿವೆ.

ಸಂತ್ರಸ್ತೆ ಹಾಗೂ ಆಕೆಯ ಕುಟುಂಬಕ್ಕೆ ಶೀಘ್ರ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಮಗ್ರ ಆರೋಪಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *