ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ವಿವಾದ: ತೈಲ ಕಂಪನಿಗಳಿಂದ ರಿಯಲ್ ಟೈಂ ಟೆಸ್ಟ್ ಶುರು

ಬೆಂಗಳೂರು: ಎಥೆನಾಲ್ (Ethanol) ಸಮರ ತಾರಕಕ್ಕೇರಿರುವ ನಡುವೆ, ರಾಜ್ಯ ಸರ್ಕಾರದ ಆರೋಪಕ್ಕೆ, ಖುದ್ದು ತೈಲ ಕಂಪನಿಗಳೇ ಟಾಂಗ್ ಕೊಡ್ತಿವೆ. ಸರ್ಕಾರದ ಗಂಭೀರ ಆರೋಪದ ನಡುವೆ, ಈಗ ತೈಲ ಕಂಪನಿಗಳೇ ರಿಯಲ್ ಟೈಂ ಟೆಸ್ಟ್ ಗೆ ಮುಂದಾಗುವ ಮೂಲಕ ಸತ್ಯತೆ ಪತ್ತೆ ಮಾಡ್ತೀವೆ.

ರಾಜ್ಯದ ಪೆಟ್ರೋಲ್ ಬಂಕ್ ಗಳಲ್ಲಿ ಲೀಟರ್ ಪೆಟ್ರೋಲ್ಗೆ 20% ಮೀರಿ, ಎಥನಾಲ್ ಮಿಕ್ಸ್ ಮಾಡಲಾಗುತ್ತಿದೆ ಎಂಬ ರಾಜ್ಯ ಸರ್ಕಾರದ ಆರೋಪ ಸಂಬಂಧ, ಈಗ ಸರ್ಕಾರ ಮತ್ತು ಪೆಟ್ರೋಲ್ ಬಂಕ್ (Petrol Pump) ಮಾಲೀಕರ ನಡುವಿನ ಸಮರ ಮತ್ತಷ್ಟು ತಾರಕಕ್ಕೇರಿದೆ. ಕಳೆದ ಕೆಲ ದಿನಗಳ ಹಿಂದಷ್ಟೇ, ಬೇರೆ ಬೇರೆ ಸಂಸ್ಥೆಗಳ ಬಂಕ್ ಗಳ ಪೆಟ್ರೋಲನ್ನ, ಖಾಸಗಿ ಲ್ಯಾಬ್ ನಲ್ಲಿ ಟೆಸ್ಟ್ ಗೆ ಒಳಪಡಿಸಿದ್ದ ಸರ್ಕಾರ, 20% ಮೀರಿ ಎಥನಾಲ್ ಬಳಸಲಾಗಿದೆ ಅನ್ನೋ ಗಂಭೀರ ಆರೋಪ ಮಾಡಿತ್ತು. ಈ ಬೆನ್ನಲ್ಲೆ ಸರ್ಕಾರದ ಆರೋಪಕ್ಕೆ ಬಂಕ್ ಗಳೇ ತಿರುಗೇಟು ನೀಡುತ್ತಿದ್ದು, ತೈಲ ಕಂಪನಿಗಳು ಎಥನಾಲ್ ರಿಯಲ್ ಟೈಂ ಟೆಸ್ಟ್ ಗೆ ಮುಂದಾಗ್ತಿವೆ.ಏನಿದು ರಿಯಲ್ ಟೈಂ ಟೆಸ್ಟಿಂಗ್?
ಹೌದು. ನಗರದ ಅನೇಕ ಪೆಟ್ರೋಲ್ ಬಂಕ್ಗಳಲ್ಲಿ ಈಗ ಖುದ್ದು ರಿಯಲ್ ಟೈಂ ಟೆಸ್ಟಿಂಗ್ ಮೂಲಕ ಸರ್ಕಾರದ ಆರೋಪಕ್ಕೆ ತಿರುಗೇಟು ನೀಡುವ ಕೆಲಸಕ್ಕೆ ತೈಲ ಕಂಪನಿಗಳು ಮುಂದಾಗ್ತಿವೆ. ಅದು ಕೂಡ ಗ್ರಾಹಕರ ಮುಂದೆಯೇ. ಒಂದು ಗಾಜಿನ ಸಬಾಟಲ್ ಗೆ 100ಎಂಎಲ್ ಪೆಟ್ರೋಲ್ ಮಾದರಿಯನ್ನ ಹಾಕಿ, ಅದಕ್ಕೆ ಸರಿಯಾಗಿ 10 ಎಂಎಲ್ ನೀರನ್ನು ಸೇರಿಸಿ. 1 ರಿಂದ 2 ನಿಮಿಷಗಳ ಕಾಲ ಚೆನ್ನಾಗಿ ಕುಲುಕಿ ನಂತರ ಅದನ್ನು 5 ನಿಮಿಷಗಳ ಕಾಲ ಕದಲದಂತೆ ನೇರವಾಗಿ ಇಟ್ಟಾಗ, ಪೆಟ್ರೋಲ್ ಮತ್ತು ನೀರು ಬೇರೆ ಬೇರೆಯಾಗಿ ಎರಡು ಪದರಗಳಾಗುತ್ತವೆ. ನೀರು ಕೆಳಭಾಗದಲ್ಲಿ ನಿಲ್ಲುತ್ತದೆ, ಪೆಟ್ರೋಲ್ ಮೇಲ್ಭಾಗದಲ್ಲಿ ತೇಲುತ್ತದೆ. ಪೆಟ್ರೋಲ್ನಲ್ಲಿ ಎಥೆನಾಲ್ ಇದ್ದರೆ, ಅದು ನೀರಿನೊಂದಿಗೆ ಬೆರೆತು ಕೆಳಗಿನ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಈ ರೀತಿಯ ಪರೀಕ್ಷೆಯನ್ನು ಗ್ರಾಹಕರ ಮುಂದೆಯೇ ಮಾಡಿ, 20% ಗಿಂತ ಕಡಿಮೆ ಎಥನಾಲ್ ಇರೋದನ್ನ ಸಾಕ್ಷಿ ಸಮೇತ ತೋರಿಸುವ ಮೂಲಕ, ಸರ್ಕಾರದ ಆರೋಪಕ್ಕೆ ತಿರುಗೇಟು ನೀಡುತ್ತಿದ್ದಾರೆ. ಆದರೆ ಪೆಟ್ರೊಲಿಯಂ ಸಂಸ್ಥೆಗಳ, ರಿಯಲ್ ಟೈಂ ಟೆಸ್ಟ್ ನಿಖರವಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ. ಸರ್ಕಾರ ಅಧಿಕೃತವಾಗಿ ಈ ಟೆಸ್ಟ್ ಗಳನ್ನ ಲ್ಯಾಬ್ ಗಳಮೂಲಕ ಮಾಡಿಸಿ ವರದಿ ಪಡೆದಿದ್ದು, ಈ ರೀತಿಯ ಟೆಸ್ಟ್ ಗಳಲ್ಲಿ ಇದು ಪೂರ್ಣಪ್ರಮಾಣದ ರಿಸಲ್ಟ್ ಬಾರದು. ಹಾಗಾಗಿ ಇದು ನಿಖರವಲ್ಲ ಅನ್ನುವ ಮೂಲಕ ತೈಲ ಕಂಪನಿಗಳ ರಿಯಲ್ ಟೈಂ ಟೆಸ್ಟ್ ಅನ್ನ ತಳ್ಳಿಹಾಕಿದೆ.