ಜಿಯೋ ಐಪಿಒ ಅಬ್ಬರ: ಮೊದಲ ದಿನವೇ ಷೇರು ಬೆಲೆಯಲ್ಲಿ ಶೇ.21.36ರಷ್ಟು ಏರಿಕೆ!

ಮುಂಬೈ: ಜಿಯೋ (Jio Platforms IPO) ತನ್ನ ಷೇರು ಮಾರುಕಟ್ಟೆ ಪದಾರ್ಪಣೆಯಲ್ಲಿ ಹೂಡಿಕೆದಾರರಿಗೆ ಬಂಪರ್ ಲಾಭವನ್ನು ನೀಡಿದೆ. ಇಂದು(ಅ. 28) ರಂದು ಮಾರುಕಟ್ಟೆಗೆ ಪ್ರವೇಶಿಸಿದ ಜಿಯೋ ಪ್ಲಾಟ್‌ಫಾರ್ಮ್ಸ್ ಷೇರುಗಳು, 21.36% ಪ್ರೀಮಿಯಂ ಲಾಭದೊಂದಿಗೆ 1,358 ಕ್ಕೆ ಲಿಸ್ಟ್ ಆಗಿವೆ. ಈ ಮೂಲಕ ಐಪಿಒ ಹಂಚಿಕೆಯಲ್ಲಿ ಷೇರು ಪಡೆದ ಗ್ರಾಹಕರಿಗೆ ಆರಂಭದಲ್ಲೇ ಭಾರೀ ಲಾಭ ಗಳಿಸಿದ್ದಾರೆ.

ಐಪಿಒ ಸಮಯದಲ್ಲಿ ಪ್ರತಿ ಷೇರಿಗೆ 1,119 ರೂ. ದರವನ್ನು ನಿಗದಿ ಮಾಡಲಾಗಿತ್ತು. ಇಂದು ಪ್ರತಿ ಷೇರು 1,358 ರೂ.ಗೆ ಲಿಸ್ಟ್ ಆಗಿದೆ. ಇದರಿಂದ ಪ್ರತಿ ಷೇರಿಗೆ 239 ರೂ. ರಷ್ಟು ಲಾಭ ಸಿಕ್ಕಿದೆ. ನೇರ ಐಪಿಒ ಖರೀದಿ ಸಂದರ್ಭದಲ್ಲಿ ಒಂದು ಲಾಟ್‌ನಲ್ಲಿ 12 ಷೇರುಗಳಿದ್ದವು. ಅದರಂತೆ ಕನಿಷ್ಠ ಹೂಡಿಕೆ ಮಾಡಿದವರಿಗೆ ಲಿಸ್ಟಿಂಗ್ ದಿನವೇ 2,868 ರೂ. ನಿವ್ವಳ ಲಾಭ ಸಿಕ್ಕಿದೆ.
2ನೇ ದೊಡ್ಡ ಕಂಪನಿ
ಲಿಸ್ಟಿಂಗ್ ಆದ ಬೆನ್ನಲ್ಲೇ ಜಿಯೋ 12.5 ಲಕ್ಷ ಕೋಟಿ ರೂ.ಗೂ ಅಧಿಕ ಮಾರುಕಟ್ಟೆ ಮೌಲ್ಯ (Market Cap) ಹೊಂದಿದೆ. ಈ ಮೂಲಕ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಮತ್ತು ಭಾರ್ತಿ ಏರ್‌ಟೆಲ್ ಕಂಪನಿಗಳನ್ನು ಹಿಂದಿಕ್ಕಿ, ರಿಲಯನ್ಸ್ ಇಂಡಸ್ಟ್ರೀಸ್ ನಂತರ ಭಾರತದ 2ನೇ ಅತಿ ದೊಡ್ಡ ಮೌಲ್ಯದ ಕಂಪನಿಯಾಗಿ ಜಿಯೋ ಹೊರಹೊಮ್ಮಿದೆ.
ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಜಿಯೋ ಐಪಿಒ ಅತ್ಯಂತ ಯಶಸ್ವಿ ಐಪಿಒ ಆಗಿ ಹೊರಹೊಮ್ಮಿದೆ. ಒಟ್ಟು 30,213 ಕೋಟಿ ಮೌಲ್ಯದ ಈ ಐಪಿಒ ಹುಂಡೈ ಮೋಟಾರ್ಸ್‌ನ ದಾಖಲೆಯನ್ನು ಮುರಿದಿದೆ. ಹುಂಡೈ ಮೋಟಾರ್ ಇಂಡಿಯಾ ಲಿಮಿಟೆಡ್ ಐಪಿಒ ಒಟ್ಟು 27,870.16 ಕೋಟಿ ರೂ. ಮೊತ್ತದ್ದಾಗಿತ್ತು. ಜಿಯೋ ಐಪಿಒ ಬರುವ ಮುನ್ನ ಇದುವೇ ಭಾರತೀಯ ಷೇರು ಮಾರುಕಟ್ಟೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡ ಐಪಿಒ ಆಗಿತ್ತು. ಆದರೆ ಅಕ್ಟೋಬರ್ 22, 2024 ರಂದು ಷೇರು ಮಾರುಕಟ್ಟೆಯಲ್ಲಿ ಹ್ಯುಂಡೈ ಷೇರುಗಳು ನಿರಾಶಾದಾಯಕವಾಗಿ ಸುಮಾರು ಶೇ.1.3 ರಿಯಾಯಿತಿಯಲ್ಲಿ ಅಂದರೆ 1,934 ರೂ.ಗೆ ಲಿಸ್ಟ್ ಆಗಿದ್ದವು. ಹೂಡಿಕೆಯಾದ ಹಣ ಏನಾಗುತ್ತೆ?
ಐಪಿಒ ಮೂಲಕ ಸಂಗ್ರಹಿಸಿದ 30,200 ಕೋಟಿ ರೂ. ಹಣದಲ್ಲಿ 27,500 ಕೋಟಿ ರೂ.ಯನ್ನು ಜಿಯೋ ಇನ್ಫೋಕಾಮ್‌ನ ಸಾಲ ತೀರಿಸಲು ಬಳಸಲಾಗುತ್ತದೆ. ಇದು ಕಂಪನಿಯ ಆರ್ಥಿಕ ಬಲವನ್ನು ಹೆಚ್ಚಿಸಲಿದೆ. ಉಳಿದ ಸುಮಾರು 2,688 ಕೋಟಿ ರೂ. ಹಣವನ್ನು ಕಂಪನಿಯ ದೈನಂದಿನ ಕಾರ್ಯಾಚರಣೆ ಹಾಗೂ ಉದ್ಯಮದ ಇತರ ಅಗತ್ಯಗಳಿಗಾಗಿ ಮೀಸಲಿಡಲಾಗಿದೆ.
ಜಿಯೋ ಕಂಪನಿಯು ಮೆಟಾ (Meta) ಮತ್ತು ಗೂಗಲ್ (Google) ನಂತಹ ಜಾಗತಿಕ ದೈತ್ಯ ಸಂಸ್ಥೆಗಳ ಹೂಡಿಕೆಯನ್ನು ಹೊಂದಿದ್ದು, 53 ಕೋಟಿಗೂ ಅಧಿಕ ಗ್ರಾಹಕರನ್ನು ಹೊಂದಿದೆ.