Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಗ್ರಿ ಗೋಲ್ಡ್ ಸಂತ್ರಸ್ತರ ದಾಖಲೆ ಪರಿಶೀಲನೆಗೆ ಚಾಲನೆ!

Spread the love

ಬೆಂಗಳೂರು (ಅ.24): ದಕ್ಷಿಣ ಭಾರತದ ಲಕ್ಷಾಂತರ ಹೂಡಿಕೆದಾರರನ್ನು ಕಂಗೆಡಿಸಿದ್ದ ಭಾರಿ ಚರ್ಚಿತ ಅಗ್ರಿ ಗೋಲ್ಡ್ (AgriGold) ಪ್ರಕರಣ ನಡೆದು ದಶಕವೇ ಕಳೆದಿದೆ. ತಮ್ಮ ಜೀವಮಾನದ ಗಳಿಕೆಯನ್ನು ಕಳೆದುಕೊಂಡು ಕಂಗಾಲಾಗಿದ್ದ ಹೂಡಿಕೆದಾರರಿಗೆ ಇದೀಗ ಹೊಸ ಭರವಸೆಯೊಂದು ಮೂಡಿದೆ.

ಆಂಧ್ರಪ್ರದೇಶ ಸರ್ಕಾರ ಹಾಗೂ ಕರ್ನಾಟಕ ಸಿಐಡಿ (CID) ಜಂಟಿಯಾಗಿ ಹೂಡಿಕೆದಾರರ ಬಾಂಡ್ ಹಾಗೂ ರಸೀದಿಗಳ ಪರಿಶೀಲನಾ ಅಭಿಯಾನವನ್ನು (Verification Drive) ಪ್ರಾರಂಭಿಸಿವೆ. ಕರ್ನಾಟಕದ ಹೂಡಿಕೆದಾರರು ಹಾಗೂ ಏಜೆಂಟರ ಬಳಿ ಇರುವ ಒರಿಜಿನಲ್ ಅಗ್ರಿ ಗೋಲ್ಡ್ ಬಾಂಡ್‌ಗಳು ಮತ್ತು ರಸೀದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹಕ್ಕುಪತ್ರಗಳ ಕ್ಲೇಮ್ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

ಆಂಧ್ರಪ್ರದೇಶ ಸರ್ಕಾರ ನೇಮಿಸಿರುವ ಸಚಿವರ ವಿಶೇಷ ಸಮಿತಿಯ ಉಸ್ತುವಾರಿಯಲ್ಲಿ ಈ ಕಾರ್ಯಚರಣೆ ನಡೆಯುತ್ತಿದೆ. ಆಂಧ್ರಪ್ರದೇಶ ಸಿಐಡಿ ಡಿಜಿಪಿ ಹಾಗೂ ಕರ್ನಾಟಕ ಸಿಐಡಿ ಡಿಜಿಪಿ ಪ್ರಣಬ್ ಮೊಹಂತಿ (Pronab Mohanty, IPS) ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯ ಬಳಿಕ ಪರಿಶೀಲನಾ ಪ್ರಕ್ರಿಯೆಯನ್ನು ಸುಗಮಗೊಳಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ರಾಜ್ಯಾದ್ಯಂತ 9 ಕೇಂದ್ರಗಳು, ಅಕ್ಟೋಬರ್ 27 ರಿಂದ ನವೆಂಬರ್ 6 ರವರೆಗೆ ಪ್ರಕ್ರಿಯೆ

ಹೂಡಿಕೆದಾರರಿಗೆ ಅನುಕೂಲವಾಗುವಂತೆ ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕದಾದ್ಯಂತ ಒಟ್ಟು 9 ವಿಶೇಷ ಪರಿಶೀಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕರ್ನಾಟಕ ಪೊಲೀಸರ ಅಧಿಕೃತ ಪ್ರಕಟಣೆಯ ಪ್ರಕಾರ, ಭಾನುವಾರ ಹೊರತುಪಡಿಸಿ ಪ್ರತಿದಿನ ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 5:00 ಗಂಟೆಯವರೆಗೆ ಈ ಕೇಂದ್ರಗಳು ಕಾರ್ಯನಿರ್ವಹಿಸಲಿವೆ. ಸಂಪೂರ್ಣ ಪರಿಶೀಲನಾ ಅಭಿಯಾನವು ನವೆಂಬರ್ ತಿಂಗಳ ಪೂರ್ತಿ ನಡೆಯಲಿದ್ದು, ಬೆಂಗಳೂರು ನಗರದ ಕೇಂದ್ರವು ಅಕ್ಟೋಬರ್ 27 ರಿಂದ ನವೆಂಬರ್ 6 ರವರೆಗೆ ಕಾರ್ಯನಿರ್ವಹಿಸಲಿದೆ.

ಆದರೆ, ಈ ದಾಖಲೆ ಪರಿಶೀಲನಾ ಪ್ರಕ್ರಿಯೆಯು ತಕ್ಷಣವೇ ಹಣ ಮರುಪಾವತಿಯಾಗುವುದಕ್ಕೆ ಯಾವುದೇ ಖಾತರಿ ನೀಡುವುದಿಲ್ಲ. ದಾಖಲೆಗಳು ಅಧಿಕೃತವಾಗಿ ಪರಿಶೀಲನೆಗೊಂಡ ನಂತರ ಹೂಡಿಕೆದಾರರಿಗೆ ಹಣ ವಿತರಣೆಯ ಮುಂದಿನ ಹಂತಗಳ ಕುರಿತು ಅಧಿಕಾರಿಗಳು ಸ್ಪಷ್ಟನೆ ನೀಡಲಿದ್ದಾರೆ.

ಪರಿಶೀಲನಾ ಕೇಂದ್ರಗಳ ವಿವರ ಮತ್ತು ಅಧಿಕಾರಿಗಳ ಸಂಪರ್ಕ

ಬೆಂಗಳೂರು: ಮಹಾರಾಣಿ ಕಾಲೇಜು ಬಳಿಯ ಪ್ಯಾಲೇಸ್ ರಸ್ತೆಯಲ್ಲಿರುವ ಸಿಐಡಿ ಡಿಜಿಪಿ ಕಚೇರಿ (ಕಾರ್ಲ್ಟನ್ ಹೌಸ್ – Carlton House). ಇಲ್ಲಿ ಅಕ್ಟೋಬರ್ 27 ರಿಂದ ನವೆಂಬರ್ 6 ರವರೆಗೆ ಪರಿಶೀಲನೆ ನಡೆಯಲಿದೆ. ಸಂಪರ್ಕ ಅಧಿಕಾರಿಯಾಗಿ ಡಿವೈಎಸ್ಪಿ ರವಿ ಸಿ.ವಿ (ಮೊಬೈಲ್ ಸಂಖ್ಯೆ: 9448530601) ಅವರನ್ನು ನೇಮಿಸಲಾಗಿದೆ.

ಪ್ರಾದೇಶಿಕ ಕೇಂದ್ರಗಳು: ತುಮಕೂರು, ಮಂಡ್ಯ, ಬಾಗಲಕೋಟೆ, ಉಡುಪಿ, ರಾಯಚೂರು, ದಕ್ಷಿಣ ಕನ್ನಡ, ಚಿಕ್ಕಬಳ್ಳಾಪುರ ಹಾಗೂ ಹಾಸನ ಜಿಲ್ಲೆಗಳ ಜಿಲ್ಲಾ ಪೊಲೀಸ್ ಮುಖ್ಯ ಕಚೇರಿಗಳಲ್ಲಿ (SP Office) ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗಿದೆ. ಪ್ರತಿಯೊಂದು ಕೇಂದ್ರವೂ ಪಕ್ಕದ 2 ರಿಂದ 3 ಜಿಲ್ಲೆಗಳ ಹೂಡಿಕೆದಾರರ ದಾಖಲೆಗಳನ್ನು ಪರಿಶೀಲಿಸಲಿದೆ.

ಹೂಡಿಕೆದಾರರು ತರಬೇಕಾದ ಕಡ್ಡಾಯ ದಾಖಲೆಗಳಿವು

ಪರಿಶೀಲನೆಗೆ ಆಗಮಿಸುವ ಹೂಡಿಕೆದಾರರು ಕೆಳಗಿನ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು

ಒರಿಜಿನಲ್ ಅಗ್ರಿ ಗೋಲ್ಡ್ ಬಾಂಡ್ ಮತ್ತು ನಗದು ಸ್ವೀಕೃತಿ ರಸೀದಿ (Cash receipt).
ಒರಿಜಿನಲ್ ಬಾಂಡ್‌ನ ಸ್ವಯಂ ದೃಢೀಕರಿಸಿದ (Self-attested) ಕಲರ್ ಝೆರಾಕ್ಸ್.
ಆಧಾರ ಕಾರ್ಡ್, ಪಾನ್ (PAN) ಕಾರ್ಡ್.
ಬ್ಯಾಂಕ್ ಪಾಸ್‌ಬುಕ್ ಝೆರಾಕ್ಸ್ ಹಾಗೂ ಪಾಸ್‌ಪೋರ್ಟ್ ಸೈಜ್ ಫೋಟೋ.
ಹೂಡಿಕೆದಾರರ ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ.
ಏಜೆಂಟ್ ಹೆಸರು ಮತ್ತು ಮೊಬೈಲ್ ಸಂಖ್ಯೆ (ಲಭ್ಯವಿದ್ದರೆ).
ಡೆಪಾಸಿಟ್‌ದಾರರು ಮೃತಪಟ್ಟಿದ್ದರೆ: ಡೆಪಾಸಿಟ್‌ದಾರರು ಮೃತಪಟ್ಟಿದ್ದರೆ ನಾಮಿನಿ (Nominee) ಅವರ ಮರಣ ಪ್ರಮಾಣಪತ್ರವನ್ನು (Death Certificate) ತರಬೇಕು. ಒಂದು ವೇಳೆ ಡೆಪಾಸಿಟ್‌ದಾರ ಹಾಗೂ ನಾಮಿನಿ ಇಬ್ಬರೂ ಮೃತಪಟ್ಟಿದ್ದರೆ, ಇಬ್ಬರ ಒರಿಜಿನಲ್ ಡೆತ್ ಸರ್ಟಿಫಿಕೇಟ್‌ಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಅಗ್ರಿಗೋಲ್ಡ್‌ ಹಗರಣದ ಹಿನ್ನೆಲೆ

ಅಗ್ರಿ ಗೋಲ್ಡ್ ಪ್ರಕರಣವು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ನಡೆದ ಅತಿ ದೊಡ್ಡ ಆರ್ಥಿಕ ವಂಚನೆಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಆಕರ್ಷಕ ಬಡ್ಡಿದರ ಹಾಗೂ ಮೆಚ್ಯೂರಿಟಿ ಅವಧಿಯಲ್ಲಿ ರಿಯಾಯಿತಿ ದರದಲ್ಲಿ ಕೃಷಿ ಜಮೀನು ನೀಡುವ ಆಮಿಷ ಒಡ್ಡಿ ಸುಮಾರು 32 ಲಕ್ಷ ಹೂಡಿಕೆದಾರರಿಂದ ಬರೋಬ್ಬರಿ ₹6,380 ಕೋಟಿ ಠೇವಣಿ ಸಂಗ್ರಹಿಸಿತ್ತು. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ತಮಿಳುನಾಡು ಹಾಗೂ ಒಡಿಶಾಗಳಲ್ಲಿ ಈ ಸಂಸ್ಥೆಯು ಏಜೆಂಟರ ಭಾರಿ ಜಾಲವನ್ನು ಹೊಂದಿತ್ತು. 2014 ರ ಕೊನೆಯಲ್ಲಿ ಮೆಚ್ಯೂರಿಟಿ ಹಣ ಸಿಗದೇ ಹೂಡಿಕೆದಾರರು ಪರದಾಡಲು ಪ್ರಾರಂಭಿಸಿದಾಗ ಈ ಹಗರಣ ಬಯಲಿಗೆ ಬಂದಿತ್ತು. ಸಾಲು ಸಾಲು ದೂರುಗಳು ದಾಖಲಾದ ಬಳಿಕ ಪೊಲೀಸರು ದಾಳಿ ನಡೆಸಿ ಸಂಸ್ಥೆಯ ಪ್ರಮುಖ ಮಂಡಳಿಯನ್ನು ಬಂಧಿಸಿದ್ದರು. ಸದ್ಯ ಸುದೀರ್ಘ ಕಾನೂನು ಪ್ರಕ್ರಿಯೆಯ ಬಳಿಕ ಇದೀಗ ಸಂತ್ರಸ್ತ ಕುಟುಂಬಗಳಿಗೆ ಹಣ ಸಿಗುವ ನಿರೀಕ್ಷೆ ಚಿಗುರೊಡೆದಿದೆ.


Spread the love
Share:

administrator

Leave a Reply

Your email address will not be published. Required fields are marked *