ಬಾಲ್ಕನಿಯಿಂದ ಗುಟ್ಕಾ ಉಗುಳುವಾಗ ವಿದ್ಯುತ್ ಆಘಾತ: 65 ವರ್ಷದ ವ್ಯಕ್ತಿ ದುರ್ಮರ*ಣ!

ಮಧ್ಯಪ್ರದೇಶ: ಮೂರನೇ ಮಹಡಿಯ ಬಾಲ್ಕನಿಯಿಂದ ಗುಟ್ಕಾ ಉಗುಳಲು ಹೋದ 65 ವರ್ಷದ ವ್ಯಕ್ತಿಯೊಬ್ಬರು ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಸಿಲುಕಿ ಮೃತಪಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜ್‌ಬಸೋಡಾದಲ್ಲಿ ನಡೆದಿದೆ. ಮೃತರನ್ನು ಪ್ರಭುಲಾಲ್ ಗುಪ್ತಾ ಎಂದು ಗುರುತಿಸಲಾಗಿದೆ. ಅಕ್ಟೋಬರ್ 23ರಂದು ಮಧ್ಯಾಹ್ನ ಸುಮಾರು 1 ಗಂಟೆಗೆ ಗಾಯತ್ರಿ ನಗರದ ಬಾಡಿಗೆ ಮನೆಯ ಮೂರನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.

ಪ್ರಭುಲಾಲ್ ಗುಪ್ತಾ ಅವರು ಗುಟ್ಕಾ ಜಗಿದು ಬಾಲ್ಕನಿಯಿಂದ ಉಗುಳುತ್ತಿದ್ದಾಗ, ಅವರ ಎಂಜಲು ಮನೆಯ ಸಮೀಪ ಹಾದುಹೋಗುತ್ತಿದ್ದ 11 ಕೆವಿ ಹೈಟೆನ್ಷನ್ ವಿದ್ಯುತ್ ತಂತಿಯ ಸಂಪರ್ಕಕ್ಕೆ ಬಂದಿದೆ ಎನ್ನಲಾಗಿದೆ. ಈ ವೇಳೆ ವಿದ್ಯುತ್ ಆಘಾತದಿಂದ ಅವರು ತೀವ್ರವಾಗಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ಬಳಿಕ ತುರ್ತು ಸೇವೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದರು. ಆದರೆ ಈ ದುರಂತದಲ್ಲಿ ಪ್ರಭುಲಾಲ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಅವರು ಮೂಲತಃ ಛತ್ತರ್‌ಪುರದವರಾಗಿದ್ದು, ಕಳೆದ ಸುಮಾರು 10 ವರ್ಷಗಳಿಂದ ಗಂಜ್‌ಬಸೋಡಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಕಟ್ಟಡ ನಿರ್ಮಾಣದ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು.
ಈ ಘಟನೆ ಬಳಿಕ ಸ್ಥಳೀಯ ನಿವಾಸಿಗಳು ವಿದ್ಯುತ್ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮನೆಗಳ ಸಮೀಪದಲ್ಲೇ ಅಪಾಯಕಾರಿ ಹೈಟೆನ್ಷನ್ ತಂತಿಗಳು ಹಾದುಹೋಗುತ್ತಿರುವ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದ್ದಾರೆ. ವಿದ್ಯುತ್ ತಜ್ಞರ ಪ್ರಕಾರ, ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಎಂಜಲಿನಂತಹ ದ್ರವವು ವಿದ್ಯುತ್ ವಾಹಕದ ಸಂಪರ್ಕಕ್ಕೆ ಬಂದಾಗ ಅಪಾಯಕಾರಿ ವಿದ್ಯುತ್ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. 11 ಕೆವಿ ಹೈಟೆನ್ಷನ್ ತಂತಿಗೆ ನೇರವಾಗಿ ತಾಗದಿದ್ದರೂ ಸಮೀಪದಲ್ಲಿರುವವರಿಗೆ ಅಪಾಯ ಸಂಭವಿಸಬಹುದು.
ಮನೆಗಳ ಸಮೀಪ ಹಾದುಹೋಗುವ ಹೈಟೆನ್ಷನ್ ವಿದ್ಯುತ್ ತಂತಿಗಳ ಸುರಕ್ಷತೆಯನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಸ್ಥಳೀಯರಿಂದ ಕೇಳಿಬಂದಿದೆ.