ಅಮಿತಾಭ್ ಬಚ್ಚನ್ ನಿವಾಸ ಸ್ಫೋಟಿಸುವುದಾಗಿ ಬೆದರಿಕೆ: ಮುಂಬೈನಲ್ಲಿ ಭದ್ರತೆ ಬಿಗಿ!

ಮುಂಬೈ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಪ್ರಕರಣ ಮಾಡುವ ಮುನ್ನವೇ ಮತ್ತೊಬ್ಬ ಬಾಲಿವುಡ್ ನಟನಿಗೆ ಬೆದರಿಕೆ ಬಂಂದಿದೆ.
ಮುಂಬೈನ ಜುಹು ಪ್ರದೇಶದಲ್ಲಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ‘ಜಲ್ಸಾ’ ಬಂಗಲೆ ಸ್ಫೋಟಿಸುವುದಾಗಿ ನಗರದ ಶಾಲೆಯೊಂದರ ಇ-ಮೇಲ್‌ಗೆ ಬೆರದಿಕೆ ಬಂದಿದೆ. ಇದರ ಬೆನ್ನಲ್ಲೇ ಮುಂಬೈನಲ್ಲಿ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
‘ಸ್ಮಿತ್ ಜಾನ್ಸನ್’ ಹೆಸರಿನ ಇ-ಮೇಲ್ ಖಾತೆಯಿಂದ ಈ ಸಂದೇಶ ಕಳುಹಿಸಲಾಗಿದ್ದು, ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಕೇಂದ್ರ ಕಚೇರಿ, ಮೇಯರ್ ಕಚೇರಿ ಹಾಗೂ ಗಾಯಕ-ನಟ ದಿಲ್ಜಿತ್ ದೋಸಾಂಜ್ ಅವರ ಮುಂಬರುವ ಸಂಗೀತ ಕಾರ್ಯಕ್ರಮವನ್ನೂ ಇ-ಮೇಲ್ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.
ಇಂದು (ಶುಕ್ರವಾರ) ಬೆಳಗ್ಗೆ 11.31ಕ್ಕೆ ಈ ಬೆದರಿಕೆ ಇ-ಮೇಲ್ ಬಂದಿದೆ. ಮಧ್ಯಾಹ್ನ 1.11ಕ್ಕೆ ಶಾಲೆಯೊಂದರಲ್ಲಿ ಹಾಗೂ 3.11ಕ್ಕೆ ಮುಂಬೈ ಮೇಯರ್ ಕಚೇರಿಯಲ್ಲಿ ಸ್ಫೋಟ ನಡೆಸುವುದಾಗಿ ಸಂದೇಶದಲ್ಲಿ ಎಚ್ಚರಿಕೆ ನೀಡಲಾಗಿದೆ. ಮುಂಬೈ ಮೇಯರ್ ರಿತು ತಾವ್ಡೆ, ಕಾರ್ಪೊರೇಟರ್ ರಿತು ತಾವ್ಡೆ ಹಾಗೂ ಕಾರ್ಪೊರೇಟರ್ ಸಂಜಯ್ ಶಂಕರ್ ಘಾಡಿ ಅವರಿಗೂ ಸಂದೇಶವನ್ನ ಉದ್ದೇಶಿಸಿ ಕಳುಹಿಸಲಾಗಿದೆ.ಅಕ್ಟೋಬರ್ 31 ರಿಂದ ನವೆಂಬರ್ 27ರವರೆಗೆ ಮುಂಬೈನ ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುವ ಬೆದರಿಕೆಯನ್ನೂ ಇ-ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ. ‘ಖಲಿಸ್ತಾನ್ ಜಿಂದಾಬಾದ್’ ಎಂಬ ಘೋಷಣೆಯೊಂದಿಗೆ ಮಕ್ಕಳ ಸುರಕ್ಷತೆಯ ಬಗ್ಗೆ ಎಚ್ಚರಿಕೆ ನೀಡಲಾಗಿದೆ.
ಅಮಿತಾಭ್ ಬಚ್ಚನ್ ಮನೆ ಮೇಲೆ ದಾಳಿ
ಅ.31ರಂದು ಅಮಿತಾಭ್ ಬಚ್ಚನ್ ಅವರ ಮುಂಬೈನ ಜುಹು ಪ್ರದೇಶದಲ್ಲಿರುವ ‘ಜಲ್ಸಾ’ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆಸುವುದಾಗಿ ಇ-ಮೇಲ್‌ನಲ್ಲಿ ಬೆದರಿಕೆ ಹಾಕಲಾಗಿದೆ. ಇದರ ಜೊತೆಗೆ, 1984ರ ಸಿಖ್ ವಿರೋಧಿ ಹಿಂಸಾಚಾರವನ್ನ ಉಲ್ಲೇಖಿಸಿ, ‘ರಕ್ತಕ್ಕೆ ರಕ್ತ’ ಎಂಬ ಅರ್ಥದ ಘೋಷಣೆಯನ್ನೂ ಸಂದೇಶದಲ್ಲಿ ಬಳಸಲಾಗಿದೆ.
ನವೆಂಬರ್ 27ರಂದು ಮುಂಬೈನ ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯಲಿರುವ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ಮೇಲೆಯೂ ದಾಳಿ ನಡೆಸುವ ಬೆದರಿಕೆ ಹಾಕಲಾಗಿದೆ. ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಾಂಬ್ ಸ್ಫೋಟಿಸಿ, ಗಾಯಕನನ್ನೂ ಗುರಿಯಾಗಿಸಿ ದಾಳಿ ನಡೆಸುವುದಾಗಿ ಸಂದೇಶದಲ್ಲಿ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಬೆದರಿಕೆ ಇ-ಮೇಲ್ ಬೆನ್ನಲ್ಲೇ ಬಿಎಂಸಿ ದೂರು
ಬೆದರಿಕೆ ಇ-ಮೇಲ್ ಸ್ವೀಕರಿಸಿದ ಬಳಿಕ ಬೃಹನ್‌ಮುಂಬೈ ಮಹಾನಗರ ಪಾಲಿಕೆ (BMC) ಪೊಲೀಸರಿಗೆ ದೂರು ಸಲ್ಲಿಸಿದೆ. ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಮುಂಬೈ ಪೊಲೀಸರು ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ. ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಶ್ವಾನದಳದ ಸಿಬ್ಬಂದಿ ಬಿಎಂಸಿ ಕೇಂದ್ರ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
