ಹಿಂದೂ ಮಹಾಸಭೆದ 144ನೇ ಧ್ವಜ ದಿವಸ್: ರಾಷ್ಟ್ರೀಯ ಅಧ್ಯಕ್ಷರಾದ ರಾಜೇಶ್ ಪವಿತ್ರನ್ ಉಪಸ್ಥಿತಿಯಲ್ಲಿ ಧ್ವಜ ದಿವಸ್!

ಮಂಗಳೂರು: ಹಿಂದೂ ಮಹಾಸಭಾದ 144ನೇ ವರ್ಷಾಚರಣೆಯ ಅಂಗವಾಗಿ ಅಕ್ಟೋಬರ್ 21ರಂದು ವಿಜಯದಶಯಂದು ದೇಶಾದ್ಯಂತ ಏಕಕಾಲದಲ್ಲಿ ಧ್ವಜ ದಿವಸ್ ಆಚರಿಸಲಾಯಿತು. ಇದರ ಅಂಗವಾಗಿ ಹಿಂದೂ ಮಹಾಸಭೆಯ ಕೇಂದ್ರ ಕಚೇರಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಾಜೇಶ್ ಪವಿತ್ರನ್ ಅವರ ಉಪಸ್ಥಿತಿಯಲ್ಲಿ ಹಾಗೂ ಕರ್ನಾಟಕ ರಾಜ್ಯಾಧ್ಯಕ್ಷರಾದ ಶ್ರೀ ಡಾ. ಎಲ್.ಕೆ. ಸುವರ್ಣ ಅವರ ನೇತೃತ್ವದಲ್ಲಿ ಧ್ವಜ ದಿವಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

1882ರಲ್ಲಿ ಸ್ಥಾಪನೆಯಾದ ಹಿಂದೂ ಮಹಾಸಭೆಯು ತನ್ನ 144ನೇ ವರ್ಷಕ್ಕೆ ಕಾಲಿಟ್ಟಿರುವ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘಟನೆಯ ಬಲವರ್ಧನೆ, ಹಿಂದೂ ಸಮಾಜದ ಏಕತೆ, ರಾಷ್ಟ್ರೀಯ ಹಿತಾಸಕ್ತಿ ಹಾಗೂ ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸಂಘಟಿತ ಪ್ರಯತ್ನಗಳ ಅಗತ್ಯತೆಯ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ರಾಜೇಶ್ ಪವಿತ್ರನ್ ಅವರು, ದೇಶವು ಪ್ರಸ್ತುತ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಹಿಂದೂ ಸಮಾಜವು ಮತ್ತಷ್ಟು ಸಂಘಟಿತವಾಗಿ, ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ದೇಶದ ಮುಂದೆ ಎದುರಾಗಿರುವ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಂಘಟನೆಯ ಪ್ರತಿಯೊಬ್ಬ ಕಾರ್ಯಕರ್ತರೂ ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು. ಹಿಂದೂ ರಾಷ್ಟ್ರದ ಪರಿಕಲ್ಪನೆಯನ್ನು ಸಾಕಾರಗೊಳಿಸುವ ಗುರಿಯನ್ನು ಹೊಂದಿರುವ ಸಂಘಟನೆಯು ಆ ನಿಟ್ಟಿನಲ್ಲಿ ಮತ್ತಷ್ಟು ಬಲಿಷ್ಠವಾಗಬೇಕಿದೆ. ಈ ಉದ್ದೇಶದ ಸಾಧನೆಗೆ ಕಾರ್ಯಕರ್ತರ ಒಗ್ಗಟ್ಟು, ಸಂಘಟನಾತ್ಮಕ ಶಕ್ತಿ ಹಾಗೂ ನಿರಂತರ ಪ್ರಯತ್ನಗಳು ಅತ್ಯಂತ ಅಗತ್ಯವಾಗಿವೆ ಎಂದು ಅವರು ಪ್ರತಿಪಾದಿಸಿದರು.
ಹಿಂದೂ ಮಹಾಸಭಾದ ತತ್ವ, ಸಿದ್ಧಾಂತ ಹಾಗೂ ಉದ್ದೇಶಗಳನ್ನು ಸಮಾಜದ ಪ್ರತಿಯೊಂದು ಹಂತಕ್ಕೂ ತಲುಪಿಸುವ ಜವಾಬ್ದಾರಿ ಕಾರ್ಯಕರ್ತರ ಮೇಲಿದೆ. ಸಂಘಟನೆಯ ಬಲವರ್ಧನೆ ಕೇವಲ ಪದಾಧಿಕಾರಿಗಳ ಜವಾಬ್ದಾರಿಯಾಗಿರದೆ, ಪ್ರತಿಯೊಬ್ಬ ಕಾರ್ಯಕರ್ತನ ಕರ್ತವ್ಯವೂ ಆಗಿದೆ. ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಬೇಕು. ಹಿಂದೂ ಸಮಾಜದ ಏಕತೆಯನ್ನು ಬಲಪಡಿಸುವ ಮೂಲಕ ಸಂಘಟನೆಯ ಗುರಿ ಸಾಧನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಕರ್ನಾಟಕ ರಾಜ್ಯಾಧ್ಯಕ್ಷ ಶ್ರೀ ಡಾ. ಎಲ್.ಕೆ. ಸುವರ್ಣ ಅವರ ನೇತೃತ್ವದಲ್ಲಿ ನಡೆದ ಧ್ವಜ ದಿವಸ್ ಕಾರ್ಯಕ್ರಮವು ಸಂಘಟನೆಯ ಏಕತೆ, ಬಲವರ್ಧನೆ ಹಾಗೂ ಭವಿಷ್ಯದ ಕಾರ್ಯಯೋಜನೆಗಳಿಗೆ ಒತ್ತು ನೀಡಿತು. ಇದೇ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿಯೂ ಹಿಂದೂ ಮಹಾಸಭೆಯ ಧ್ವಜ ದಿವಸ್ ಆಚರಿಸಲಾಗಿದ್ದು, ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು.