ಕಾರವಾರದಲ್ಲಿ ಭೀಕರ ರಸ್ತೆ ಅಪಘಾತ: ಖ್ಯಾತ ಚರ್ಮರೋಗ ತಜ್ಞ ಡಾ. ಸುಭಾಷ್ ತಾಂಡೇಲ್ ದುರ್ಮರ*ಣ!

ಕಾರವಾರ: ರಸ್ತೆ ಮೇಲೆ ಏಕಾಏಕಿ ಅಡ್ಡ ಬಂದ ಹಸುವಿನಿಂದ ಸಂಭವಿಸಿದ ಅಪಘಾತದಲ್ಲಿ ಕಾರವಾರದ ಖ್ಯಾತ ಚರ್ಮರೋಗ ತಜ್ಞ, ಡಾ. ಸುಭಾಷ್ ತಾಂಡೇಲ್ (61) ಸಾವನ್ನಪ್ಪಿದ್ದಾರೆ.
ಕಾರವಾರ ತಾಲೂಕಿನ ಮಾಜಾಳಿ ಬಳಿ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ಈ ದುರ್ಘಟನೆ ಸಂಭವಿಸಿದ್ದು, ವೈದ್ಯರ ಅಕಾಲಿಕ ನಿಧನಕ್ಕೆ ಕುಟುಂಬಸ್ಥರು, ಸ್ನೇಹಿತರು ಹಾಗೂ ವೈದ್ಯಕೀಯ ವಲಯದವರು ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಡಾ. ಸುಭಾಷ್ ತಾಂಡೇಲ್ ಅವರು ಪ್ರಯಾಣಿಸುತ್ತಿದ್ದ ವಾಹನದ ಎದುರಿಗೆ ಏಕಾಏಕಿ ಹಸು ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಅವರು ಮೃತಪಟ್ಟಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ 35 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಡಾ. ಸುಭಾಷ್ ತಾಂಡೇಲ್ ಕಾರವಾರದ ಜಿಲ್ಲಾ ಆಸ್ಪತ್ರೆ ಸೇರಿದಂತೆ , ಕಾರವಾರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದರು.
ಚರ್ಮರೋಗ ತಜ್ಞರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ಅವರು, ಇತ್ತೀಚೆಗಷ್ಟೇ ಸರ್ಕಾರಿ ಸೇವೆಯಿಂದ ನಿವೃತ್ತರಾಗಿದ್ದರು. ಡಾ. ಸುಭಾಷ್ ತಾಂಡೇಲ್ ಅವರು ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯತನ ಮಾಜಿ ಸದಸ್ಯ ಪಿ.ಎಂ. ತಾಂಡೇಲ್ ಅವರ ಪುತ್ರರಾಗಿದ್ದಾರೆ. ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
