ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ!

ನವದೆಹಲಿ: ದೇಶದಲ್ಲಿ ಕಾನೂನು ಸುವ್ಯವಸ್ಥೆ (Law and order) ಹದಗೆಟ್ಟಿದೆ. ಜನ ನೆಮ್ಮದಿಯ ನಿಟ್ಟುಸಿರುವ ಬಿಡಲೂ ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ (Neha Bora), ಕಾರಣವಿಲ್ಲದೇ ಮಹಿಳೆಯನ್ನ ರಾತ್ರಿಯಿಡೀ ಕಸ್ಟಡಿಯಲ್ಲಿಡಲು ಯಾವ ಅಧಿಕಾರವಿದೆ? ಎಂದು ಪ್ರಶ್ನೆ ಮಾಡಿದರು.ದೆಹಲಿ ಪೊಲೀಸರ ವಶದಿಂದ ಶನಿವಾರ (ಇಂದು) ಮುಂಜಾನೆ ಬಿಡುಗಡೆಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ನೇಹಾ ಬೋರಾ, ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸಿದರು. ನನ್ನನ್ನ ವಶಕ್ಕೆ ಪಡೆದಿದ್ದ ಸಂದರ್ಭದಲ್ಲಿ ದೆಹಲಿ ಪೊಲೀಸರು ವಕೀಲರ ಭೇಟಿಗೂ ಅವಕಾಶ ನೀಡಿರಲಿಲ್ಲ ಎಂದು ಆರೋಪಿಸಿದರು.

ಪೊಲೀಸರು ನನ್ನ ಹೆಸರು, ವಿಳಾಸ ಮತ್ತು ಇತರ ವಿವರಗಳನ್ನ ಕೇಳಿದರು. ಬಹಳ ಸಮಯದವರೆಗೆ ಅವರು ನನ್ನನ್ನ ಮಾತನಾಡೋದಕ್ಕಾಗಲಿ, ವಕೀಲರನ್ನ ಭೇಟಿ ಮಾಡೋದಕ್ಕಾಗಲಿ ಬಿಡಲಿಲ್ಲ. ನಮ್ಮ ವಕೀಲರು ನನ್ನನ್ನು ಸಂಪರ್ಕಿಸಲು 5-6 ಗಂಟೆಗಳ ಕಾಲ ಪ್ರಯತ್ನಿಸಿದೆ. ಇಂತಹ ಕೆಲಸಗಳನ್ನ ಈ ಜನರು ಬಹಳ ಕಾಲದಿಂದ ಮಾಡುತ್ತಲೇ ಬಂದಿದ್ದಾರೆ ಎಂದು ದೂರಿದರು.
ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ
ಕಾನೂನು ಮತ್ತು ಸುವ್ಯವಸ್ಥೆಯನ್ನ ಎಲ್ಲ ರೀತಿಯಲ್ಲೂ ಉಲ್ಲಂಘಿಸಲಾಗುತ್ತಿದೆ. ಸಾಮಾನ್ಯ ನಾಗರಿಕರನ್ನ ಘೋರ ಅಪರಾಧಿಗಳಂತೆ ನಡೆಸಿಕೊಳ್ಳಲಾಗುತ್ತಿದೆ. ದೇಶದಲ್ಲಿ ಬಹಳ ವರ್ಷಗಳಿಂದ ಈ ಪದ್ಧತಿ ಮುಂದುವರಿದಿದೆ. ಪ್ರಸ್ತುತ ನಡೆಯುತ್ತಿರುವ ಪ್ರತಿಭಟನೆಗಳು ಜನರನ್ನು ಹೇಗೆ ವಶಕ್ಕೆ ಪಡೆಯಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಬಹಿರಂಗಪಡಿಸಿದೆ. ಹಗಲಿರಲಿ ಅಥವಾ ಸಂಜೆಯಾಗಿರಲಿ, ಜನರನ್ನ ವಶಕ್ಕೆ ಪಡೆದು ರಾತ್ರಿಯಿಡೀ ಕಸ್ಟಡಿಯಲ್ಲಿ ಇರಿಸಲಾಗುತ್ತಿದೆ. ಮರುದಿನ ಬೆಳಿಗ್ಗೆ ಅಥವಾ ಸಂಜೆಯ ವೇಳೆಗೆ ಬಿಡುಗಡೆ ಮಾಡಲಾಗ್ತಿದೆ. ಇದಕ್ಕೆ ಯಾವ ಅಧಿಕಾರದ ಆಧಾರವಿದೆ? ಬಂಧಿತರನ್ನ ರಾತ್ರಿಯಿಡೀ ಕಸ್ಟಡಿಯಲ್ಲಿ ಇರಿಸಲು ಯಾವ ಕಾನೂನು ಅಥವಾ ಆದೇಶ ಅನುಮತಿ ನೀಡುತ್ತದೆ? ಎಂದಿ ನೇಹಾ ಪ್ರಶ್ನಿಸಿದರು.ಇದೇ ವೇಲೆ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತ (CEC) ಜ್ಞಾನೇಶ್ ಕುಮಾರ್ ಅವರನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡಲೂ ಸಾಧ್ಯವಾಗುತ್ತಿಲ್ಲ
ಕಾನೂನಿನ ಪ್ರಕಾರ, ವಿಶೇಷವಾಗಿ ಮಹಿಳೆಯರನ್ನ ಸೂರ್ಯಾಸ್ತದ ನಂತರ ಬಿಡುಗಡೆ ಮಾಡಬೇಕು. ಆದ್ರೆ, ಇಲ್ಲಿ ಹಾಗೆ ನಡೆಯುತ್ತಿಲ್ಲ. ಮತ್ತೊಂದುಕಡೆ, ದೇಶದಲ್ಲಿ ಅರಾಜಕತೆ ಮತ್ತು ಗೊಂದಲ ಸೃಷ್ಟಿಯಾಗುತ್ತಿದೆ ಎಂಬ ಹೊಸ ನಿರೂಪಣೆ ಹರಡುತ್ತಿದ್ದಾರೆ. ಯಾವ ಅರಾಜಕತೆ ಮತ್ತು ಗೊಂದಲದ ಬಗ್ಗೆ ನೀವು ಮಾತನಾಡುತ್ತಿದ್ದೀರಿ? ದೆಹಲಿಯ ಕೇಂದ್ರ ಭಾಗದಲ್ಲಿ ನೀವು ಸೃಷ್ಟಿಸಿದ ಅವ್ಯವಸ್ಥೆಯ ಬಗ್ಗೆನಾ? ದೆಹಲಿಯ ಜನರಿಗೆ ನೆಮ್ಮದಿಯ ನಿಟ್ಟುಸಿರು ಬಿಡಲೂ ಸಾಧ್ಯವಾಗುತ್ತಿಲ್ಲ. ಕೆಲಸಕ್ಕೆ ತೆರಳಲು ಯಾವುದೇ ಮಾರ್ಗವನ್ನು ಆಯ್ಕೆ ಮಾಡಿಕೊಂಡರೂ ರಸ್ತೆಗಳನ್ನು ಬಂದ್ ಮಾಡ್ತಿದ್ದಾರೆ ಎಂದು ಕಿಡಿ ಕಾರಿದರು.
ಜನರನ್ನ ನೆಮ್ಮದಿಯಿಂದ ಬದುಕಲು ಬಿಡಿ
ದೇಶಾದ್ಯಂತ ಅರಾಜಕತೆ ಮತ್ತು ಗೊಂದಲ ಹರಡುತ್ತಿರುವವರು ನೀವೇ. ದಯವಿಟ್ಟು ದೇಶದ ಜನರನ್ನ ನೆಮ್ಮದಿಯಿಂದ ಬದುಕಲು ಬಿಡಿ. ಜ್ಞಾನೇಶ್ ಕುಮಾರ್ ಅವರನ್ನ ಪದಚ್ಯುತಗೊಳಿಸಿ, SIR ಪ್ರಕ್ರಿಯೆ ನಿಲ್ಲಿಸಿ. ಇದರಿಂದ ದೇಶದ ಸಾಮಾನ್ಯ ನಾಗರಿಕರು ನೆಮ್ಮದಿಯ ನಿಟ್ಟುಸಿರು ಬಿಡಲು, ನಿರಾಳವಾಗಿರಲು ಮತ್ತು ತಮ್ಮ ಮತದಾನದ ಹಕ್ಕುಗಳನ್ನ ಖಚಿತಪಡಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಒತ್ತಾಯಿಸಿದರು.
ಈ ಮಧ್ಯೆ ಅಭಿಜೀತ್ ದೀಪ್ಕೆ ಅವರನ್ನ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿರುವ ಸಿಜೆಪಿ, ದೀಪ್ಕೆ ಎಲ್ಲಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದೆ.