ಮಂಗಳೂರು: ಬಡಗುತಿಟ್ಟು ಯಕ್ಷಗಾನ ರಂಗದ ಮೇರು ಕಲಾವಿದ ಥಂಡಿಮನೆ ಶ್ರೀಪಾದ ಭಟ್ ವಿಧಿವಶ!

ಮಂಗಳೂರು : ಬಡಗುತಿಟ್ಟು ಯಕ್ಷಗಾನ ರಂಗದ ಪ್ರಖ್ಯಾತ ಹಾಗೂ ಗತ್ತು-ಗಾಂಭೀರ್ಯದ ವೇಷಧಾರಿಯಾಗಿ ಕರಾವಳಿಯ ಮನೆಮಾತಾಗಿದ್ದ ಥಂಡಿಮನೆ ಶ್ರೀಪಾದ ಭಟ್ (62) ಅವರು ಗುರುವಾರ (ಅಕ್ಟೋಬರ್ 15) ಬೆಳಗಿನ ಜಾವ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕಳೆದ ಕೆಲವು ಕಾಲದಿಂದ ತೀವ್ರವಾದ ಕಾಲುನೋವು ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅನಾರೋಗ್ಯದಿಂದ ಚೇತರಿಸಿಕೊಂಡು ಮರಳಿ ರಂಗಸ್ಥಳಕ್ಕೆ ಬರುವ ಮಹದಾಸೆ ಹೊಂದಿದ್ದ ಶ್ರೀಪಾದ ಭಟ್ ಅವರು ಚಿಕಿತ್ಸೆ ಪಡೆಯುತ್ತಿದ್ದಂತೆಯೇ ಸಂಭವಿಸಿದ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಇವರ ಅಗಲಿಕೆ ಯಕ್ಷಗಾನ ರಂಗಕ್ಕೆ ಎಂದೂ ತುಂಬಲಾರದ ನಷ್ಟವನ್ನುಂಟುಮಾಡಿದೆ.
ಬಡಗುತಿಟ್ಟಿನ ಪ್ರಸಿದ್ಧ ಡೇರೆಮೇಳಗಳಾದ ಸಾಲಿಗ್ರಾಮ ಮೇಳ, ಪೆರ್ಡೂರು ಮೇಳ ಸೇರಿದಂತೆ ವಿವಿಧ ಪ್ರಸಿದ್ಧ ಬಯಲಾಟ ಮೇಳಗಳಲ್ಲಿ ವೇಷಧಾರಿಯಾಗಿ ಹಂತ ಹಂತವಾಗಿ ಬೆಳೆದು ಬಂದ ಶ್ರೀಪಾದ ಭಟ್ ಅವರು, ತಮ್ಮ ವಿಶಿಷ್ಟ ಗತ್ತು ಹಾಗೂ ಗಾಂಭೀರ್ಯದ ಹಾವಭಾವಗಳ ಮೂಲಕ ನಾಯಕ ಹಾಗೂ ಖಳನಾಯಕ (ಪ್ರತಿಪಾದ) ಎರಡೂ ರೀತಿಯ ಪಾತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ಬಡಗುತಿಟ್ಟು ಯಕ್ಷಗಾನ ರಂಗದಲ್ಲಿ ತಮ್ಮದೇ ಆದ ಪ್ರತ್ಯೇಕ ಛಾಪು ಮೂಡಿಸಿದ್ದ ಇವರು, ಯಕ್ಷಗಾನ ಲೋಕದ ಸಮರ್ಥ ಎರಡನೇ ವೇಷಧಾರಿಯಾಗಿ ಗುರುತಿಸಿಕೊಂಡಿದ್ದರು.
ಭೀಷ್ಮ, ಸಾಲ್ವ, ಹನುಮಂತ, ರಾವಣ, ರಾಮ, ದಕ್ಷ, ಈಶ್ವರ, ವೀರಮಣಿ, ದುಷ್ಟಬುದ್ಧಿ, ಮಾಗಧ ಸೇರಿದಂತೆ ಹಲವಾರು ಪೌರಾಣಿಕ ಹಾಗೂ ನೂತನ ಪ್ರಸಂಗಗಳ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿ ರಂಗದ ಮೇರೆ ಮೆರೆದಿದ್ದರು. ಮೃತರು ತಂದೆ, ತಾಯಿ ಹಾಗೂ ಪತ್ನಿಯನ್ನು ಅಗಲಿದ್ದು, ಅವರ ನಿಧನಕ್ಕೆ ಯಕ್ಷಗಾನ ಕಲಾವಿದರು ಹಾಗೂ ಕಲಾಪ್ರೇಮಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ.