ಮಂಗಳೂರು: ಎಮ್ಮೆಕೆರೆ ಹಾಲ್‌ನಲ್ಲಿ ಬಾಲ್ಕನಿ ತಡೆಗೋಡೆ ಕುಸಿದು ವಿದ್ಯಾರ್ಥಿ ಸಾವು – ಪದಗ್ರಹಣ ಕಾರ್ಯಕ್ರಮದಲ್ಲೇ ದಾರುಣ ಘಟನೆ!”

ಮಂಗಳೂರು: ನಗರದ ಎಮ್ಮೆಕೆರೆಯ ರಮಾ ಲಕ್ಷ್ಮೀನಾರಾಯಣ ಹಾಲ್‌ನಲ್ಲಿ ವಿದ್ಯಾರ್ಥಿ ಸಂಘಟನೆಯ ಪದಗ್ರಹಣ ಕಾರ್ಯಕ್ರಮದ ವೇಳೆ ಬಾಲ್ಕನಿಯ ತಡೆಗೋಡೆ ಹಾಗೂ ಕಾಂಕ್ರೀಟ್ ಸ್ಲ್ಯಾಬ್ ಕುಸಿದುಬಿದ್ದ ದುರಂತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪಿಯು ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾನೆ. ಹಳೆಯಂಗಡಿ ಮೂಲದವರಾಗಿದ್ದು, ಪ್ರಸ್ತುತ ಪಾಂಡೇಶ್ವರದ ಫ್ಲ್ಯಾಟ್‌ವೊಂದರಲ್ಲಿ ವಾಸವಿದ್ದ ಮೊಯ್ದೀನ್ ಶಮ್ಮಾಸ್ (16) ಮೃತ ದುರದೃಷ್ಟಕರ ವಿದ್ಯಾರ್ಥಿ. ಈತ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡುತ್ತಿದ್ದನು.

ಸರ್ವಕಾಲೇಜು ವಿದ್ಯಾರ್ಥಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಂದು ಮಂಗಳೂರಿನ ಎಮ್ಮೆಕೆರೆಯಲ್ಲಿರುವ ರಮಾ ಲಕ್ಷ್ಮೀನಾರಾಯಣ ಹಾಲ್‌ನಲ್ಲಿ ಪದಗ್ರಹಣ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ವಿದ್ಯಾರ್ಥಿಗಳು ಬೃಹತ್ ರ್ಯಾಲಿಯಲ್ಲಿ ಆಗಮಿಸುತ್ತಿದ್ದರು. ಈ ವೇಳೆ ರ್ಯಾಲಿಯನ್ನು ವೀಕ್ಷಿಸಲು ನೂರಾರು ವಿದ್ಯಾರ್ಥಿಗಳು ಸಭಾಭವನದ ಮೊದಲ ಮಹಡಿಯ ವೆರಾಂಡಾದಲ್ಲಿ ಜಮಾಯಿಸಿ ಆಸರೆ ಗೋಡೆಗೆ ಒರಗಿ ನಿಂತಿದ್ದರು. ಆದರೆ, ಕಾಂಕ್ರೀಟ್ ತಡೆಗೋಡೆಯು ಅತಿಯಾದ ಭಾರ ತಾಳಲಾರದೆ ಏಕಾಏಕಿ ಕುಸಿದುಬಿದ್ದಿದೆ. ಕೆಳಗೆ ನಿಂತು ರ್ಯಾಲಿ ವೀಕ್ಷಿಸುತ್ತಿದ್ದ ಶಮ್ಮಾಸ್ ಅವರ ತಲೆಯ ಮೇಲೆ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ನೇರವಾಗಿ ಬಿದ್ದಿದೆ. ಪರಿಣಾಮವಾಗಿ ಆತನ ತಲೆ, ಭುಜ ಹಾಗೂ ಬೆನ್ನಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದವು.
ರಕ್ತಸ್ರಾವದಿಂದ ಬಳಲುತ್ತಿದ್ದ ಶಮ್ಮಾಸ್‌ನನ್ನು ತಕ್ಷಣವೇ ಸ್ಥಳೀಯರು ಹಾಗೂ ಸಹಪಾಠಿಗಳು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಕೊಡಿಸಿದ್ದರು. ಆದರೆ, ಗಂಭೀರ ಗಾಯಗೊಂಡಿದ್ದ ಶಮ್ಮಾಸ್ ರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ವೈದ್ಯರು ಅಧಿಕೃತವಾಗಿ ದೃಢಪಡಿಸಿದ್ದಾರೆ. ಘಟನೆಯಲ್ಲಿ ಮಹಡಿಯಿಂದ ಕೆಳಗೆ ಬಿದ್ದ ಇತರ ನಾಲ್ವರು ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ದುರಂತಕ್ಕೆ ಸಂಬಂಧಿಸಿದಂತೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಸಭಾಭವನದ ಮಾಲೀಕ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧ ಪ್ರಕರಣ ದಾಖಲಾಗಿದೆ. ಕಟ್ಟಡವು ತೀರಾ ಹಳೆಯದಾಗಿದ್ದರೂ ಮತ್ತು ಶಿಥಿಲಾವಸ್ಥೆಯಲ್ಲಿದ್ದರೂ ಪರಿಶೀಲಿಸದೆ ಬೃಹತ್ ಕಾರ್ಯಕ್ರಮಕ್ಕೆ ಅವಕಾಶ ನೀಡಿದ್ದು, ಹಾಗೂ ಅಪಾರ ಸಂಖ್ಯೆಯ ವಿದ್ಯಾರ್ಥಿಗಳನ್ನು ಸೇರಿಸಿ ಜೀವದ ಜೊತೆ ನಿರ್ಲಕ್ಷ್ಯ ವಹಿಸಿದ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.