ಶ್ರೀಕಾಕುಳಂ: ರೈಲ್ವೆ ಹಳಿ ದಾಟುತ್ತಿದ್ದಾಗ ಡಿಕ್ಕಿ ಹೊಡೆದ ರೈಲು – ನಾಲ್ವರು ಶಾಲಾ ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರ*ಣ!

ತೆಕ್ಕಲಿ (ಆಂಧ್ರಪ್ರದೇಶ): ರೈಲ್ವೆ ಹಳಿ ದಾಟುತ್ತಿದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಶಾಲಾ ವಿದ್ಯಾರ್ಥಿಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಶ್ರೀಕಾಕುಳಂ ಜಿಲ್ಲೆಯ ತೆಕ್ಕಲಿ ಪಟ್ಟಣದ ಬಳಿ ಮಂಗಳವಾರ ನಡೆದಿದೆ. ಮೃತಪಟ್ಟವರನ್ನು ವಿಶಾಖ ರಾವ್, ದಿಲೀಪ್ ಕುಮಾರ್, ಶಿವ ಹಾಗೂ ಶರತ್ ಕುಮಾರ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ತೆಕ್ಕಲಿಯ ಸ್ಥಳೀಯ ಪರಿಶಿಷ್ಟ ಜಾತಿ (SC) ಸಮಾಜ ಕಲ್ಯಾಣ ಬಾಲಕರ ಹಾಸ್ಟೆಲ್ನ ವಿದ್ಯಾರ್ಥಿಗಳಾಗಿದ್ದಾರೆ.

ವಿದ್ಯಾರ್ಥಿಗಳು ತೆಕ್ಕಲಿ ಪಟ್ಟಣದ ಬಳಿ ರೈಲ್ವೆ ಹಳಿಗಳನ್ನು ದಾಟುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಈ ಸಂದರ್ಭದಲ್ಲಿ ಹಳಿಯ ಮೇಲೆ ವೇಗವಾಗಿ ಬಂದ ರೈಲನ್ನು ವಿದ್ಯಾರ್ಥಿಗಳು ಗಮನಿಸಿರಲಿಲ್ಲ ಎನ್ನಲಾಗಿದೆ. ರೈಲು ಏಕಾಏಕಿ ಡಿಕ್ಕಿ ಹೊಡೆದ ರಭಸಕ್ಕೆ ನಾಲ್ವರೂ ವಿದ್ಯಾರ್ಥಿಗಳು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಘಟನೆಯಲ್ಲಿ ಸಲ್ಮಾನ್ ರಾಜ್ ಎಂಬ ಮತ್ತೊಬ್ಬ ವಿದ್ಯಾರ್ಥಿ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ತಕ್ಷಣವೇ ತೆಕ್ಕಲಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಪೊಲೀಸರು ಹಾಗೂ ರೈಲ್ವೆ ಭದ್ರತಾ ಪಡೆ (RPF) ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಮೃತದೇಹಗಳನ್ನು ಶವಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ನಾಲ್ವರು ಹಾಸ್ಟೆಲ್ ವಿದ್ಯಾರ್ಥಿಗಳು ಏಕಕಾಲಕ್ಕೆ ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟುಂಬಸ್ಥರು ಹಾಗೂ ಸ್ಥಳೀಯರು ಘಟನಾ ಸ್ಥಳಕ್ಕೆ ಧಾವಿಸಿ ಕಣ್ಣೀರಿಟ್ಟಿದ್ದು, ತೆಕ್ಕಲಿ ಪ್ರದೇಶದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಶ್ರೀಕಾಕುಳಂ ಜಿಲ್ಲೆಯ ತೆಕ್ಕಲಿ ಬಳಿ ನಡೆದ ಈ ಭೀಕರ ರೈಲು ಅಪಘಾತಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ತೀವ್ರ ಆಘಾತ ಹಾಗೂ ಕಂಬನಿ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಉನ್ನತಾಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದುಕೊಂಡ ಸಿಎಂ, ಗಾಯಗೊಂಡ ವಿದ್ಯಾರ್ಥಿ ಸಲ್ಮಾನ್ ರಾಜ್ಗೆ ಅತ್ಯುತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಆದೇಶಿಸಿದ್ದಾರೆ. ಮೃತರ ಕುಟುಂಬಗಳಿಗೆ ತೀವ್ರ ಸಾಂತ್ವನ ಹೇಳಿರುವ ಅವರು, ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಸಾಧ್ಯವಿರುವ ಎಲ್ಲಾ ನೆರವು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.