ಕಾಸರಗೋಡು: ಪೊಯಿನಾಚಿಯಲ್ಲಿ ಯುವ ಕಾಂಗ್ರೆಸ್ ಮುಖಂಡ ಎನ್. ಹರಿಕೃಷ್ಣನ್ ಅನುಮಾನಾಸ್ಪದ ಸಾ*ವು!

ಕಾಸರಗೋಡು : ಶಿಕ್ಷಣ ಸಲಹಾ ಸಂಸ್ಥೆ (Educational Consultancy) ನಡೆಸುತ್ತಿದ್ದ ಕೇರಳ ಕಾಂಗ್ರೆಸ್ ಪಕ್ಷದ ಯುವ ಮುಖಂಡರೊಬ್ಬರು ಮಂಗಳವಾರ ಪೊಯಿನಾಚಿಯಲ್ಲಿರುವ ತಮ್ಮದೇ ಕಚೇರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.

ಮೃತರನ್ನು ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯ ಪೊಯಿನಾಚಿಯ ಕೋಲಮ್ಕುನ್ನು ನಿವಾಸಿ ಎನ್. ಹರಿಕೃಷ್ಣನ್ (32) ಎಂದು ಗುರುತಿಸಲಾಗಿದೆ. ಇವರು ಉಡ್ಮಾ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಹರಿಕೃಷ್ಣನ್ ಅವರು ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ನಾಪತ್ತೆಯಾಗಿದ್ದರು. ಮಂಗಳವಾರ ಬೆಳಿಗ್ಗೆಯಾದರೂ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಆತಂಕಗೊಂಡ ಅವರ ಕುಟುಂಬಸ್ಥರು ಮಧ್ಯಾಹ್ನದ ವೇಳೆಗೆ ಮೇಲ್ಪರಂಬ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿ ಹೇಳಿಕೆ ದಾಖಲಿಸುತ್ತಿದ್ದ ಸಮಯದಲ್ಲೇ, ಪೊಯಿನಾಚಿಯಲ್ಲಿರುವ ಅವರ ಕಚೇರಿಯೊಳಗೆ ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಹರಿಕೃಷ್ಣನ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಧಾವಿಸಿದ ಮೇಲ್ಪರಂಬ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು, ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.