ಧರ್ಮಸ್ಥಳ ದರ್ಶನ ಮುಗಿಸಿ ಮರಳುತ್ತಿದ್ದಾಗ ಕಾರು ಪಲ್ಟಿ – ಕೋಲಾರ ಮೂಲದ ಮೂವರಿಗೆ ತೀವ್ರ ಗಾಯ!

ಬೆಳ್ತಂಗಡಿ: ಧರ್ಮಸ್ಥಳದಿಂದ ಉಜಿರೆ ಕಡೆಗೆ ಪ್ರಯಾಣಿಸುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಕಾರಿನಲ್ಲಿದ್ದ ಮೂವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನೇತ್ರಾವತಿ ಸ್ನಾನಘಟ್ಟದ ಸಮೀಪದ ಸರ್ವಿಸ್ ಸ್ಟೇಷನ್ ತಿರುವಿನಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಸದಸ್ಯರು ಟೊಯೋಟಾ ಈಟಿಯಾಸ್ (Toyota Etios) ಕಾರಿನಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಮುಗಿಸಿ, ಉಜಿರೆ ಕಡೆಗೆ ತೆರಳುತ್ತಿದ್ದಾಗ ಸೆಪ್ಟೆಂಬರ್ 14ರ ಸೋಮವಾರ ರಾತ್ರಿ 9:30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ.ಧರ್ಮಸ್ಥಳ ಗ್ರಾಮದ ನೇತ್ರಾವತಿ ಸ್ನಾನಘಟ್ಟದ ಬಳಿ ಇರುವ ಸರ್ವಿಸ್ ಸ್ಟೇಷನ್ ಪಕ್ಕದ ಅಪಾಯಕಾರಿ ತಿರುವಿನಲ್ಲಿ ಚಲಿಸುತ್ತಿದ್ದಾಗ, ಕಾರು ಏಕಾಏಕಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಪಲ್ಟಿಯಾಗಿದೆ.
ಅಪಘಾತದ ಭೀಕರತೆಗೆ ಕಾರು ಚಾಲಕ ಶಶಿಕುಮಾರ್ ಹಾಗೂ ಕಾರಿನಲ್ಲಿದ್ದ ಮತ್ತಿಬ್ಬರ ಕೈ ಮತ್ತು ಕಾಲುಗಳಿಗೆ ತೀವ್ರ ಸ್ವರೂಪದ ಪೆಟ್ಟಾಗಿದೆ. ಘಟನೆ ನಡೆದ ತಕ್ಷಣವೇ ಗಾಯಾಳುಗಳನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಬೆಳ್ತಂಗಡಿ ಸಂಚಾರಿ (Traffic) ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
