ಬೆಳ್ತಂಗಡಿ: 20 ವರ್ಷಗಳ ನಂತರ 105 ವರ್ಷದ ತಾಯಿಯನ್ನು ಭೇಟಿಯಾದ 85 ವರ್ಷದ ಮಗಳು – ಕಣ್ಣೀರಾದ ಸಮ್ಮಿಲನ!

ಬೆಳ್ತಂಗಡಿ: ತಾಯಿಗೆ ಶತಮಾನ ಪೂರೈಸಿ 5 ವರ್ಷ (105 ವರ್ಷ), ಮಗಳಿಗೆ 85 ವರ್ಷ ವಯಸ್ಸು. ಇಬ್ಬರದ್ದೂ ಇಳಿ ವಯಸ್ಸು, ಮಗುವಿನಂತಹ ಮನಸ್ಸು! ವಯೋಸಹಜ ಅನಾರೋಗ್ಯ ಹಾಗೂ ದುರ್ಗಮ ದಾರಿಯ ಕಾರಣದಿಂದ ತಾಯಿಯನ್ನು ನೋಡಬೇಕೆಂಬ ಆಸೆ ಇದ್ದರೂ ಸಾಧ್ಯವಾಗದೇ ಕಂಗೆಟ್ಟಿದ್ದ 85 ವರ್ಷದ ಮಗಳನ್ನು, ಮೊಮ್ಮಕ್ಕಳು ದಟ್ಟ ಕಾಡಿನ ಹಾದಿಯಲ್ಲಿ ಕರೆದೊಯ್ದು 105 ವರ್ಷದ ಮುತ್ತಜ್ಜಿಯೊಂದಿಗೆ ಒಂದಾಗಿಸಿದ ಭಾವುಕ ಘಟನೆ ಬೆಳ್ತಂಗಡಿ ತಾಲೂಕಿನ ಮಲವಂತಿಕೆ ಗ್ರಾಮದ ‘ಮಕ್ಕಿ’ ಎಂಬಲ್ಲಿ ನಡೆದಿದೆ.

ಮಕ್ಕಿಯಲ್ಲಿ ಮಕ್ಕಳೊಂದಿಗೆ ವಾಸವಿರುವ 105 ವರ್ಷದ ಸೀತಮ್ಮ ಅವರಿಗೆ ಒಟ್ಟು 11 ಮಂದಿ ಮಕ್ಕಳು. ಅವರಲ್ಲಿ ಮೊದಲ ಮಗಳೇ 85 ವರ್ಷದ ಸುಶೀಲಾ. ಸೀತಮ್ಮ ಅವರ ಮನೆಗೆ ತೆರಳಲು ಸರಿಯಾದ ರಸ್ತೆ ಸಂಪರ್ಕವಿಲ್ಲ. ಜೀಪಿನಲ್ಲಿ ದಟ್ಟ ಕಾಡಿನ ಹಾದಿಯಲ್ಲಿ ಸಾಗಿ, ಬಳಿಕ ಒಂದೂವರೆ ಕಿಲೋಮೀಟರ್ ಬೆಟ್ಟ ಇಳಿದು, ಬಂಡೆ ಹತ್ತಿ, ಹೊಳೆ ದಾಟಿಯೇ ಸಾಗಬೇಕು. ಇತ್ತ ಸುಶೀಲಾ ಅವರು ತಮ್ಮ ಮಕ್ಕಳ ಜೊತೆ ಮಿತ್ತಬಾಗಿಲು ಗ್ರಾಮದ ‘ಫಗರೆ’ ಎಂಬಲ್ಲಿ ವಾಸವಿದ್ದು, ವಯೋಸಹಜ ಅನಾರೋಗ್ಯದ ಕಾರಣದಿಂದ ಇಬ್ಬರಿಗೂ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತಾಯಿ-ಮಗಳು ಮುಖಾಮುಖಿಯಾಗಿ ಭೇಟಿಯಾಗಿ ಸುಮಾರು 20 ವರ್ಷಗಳೇ ಕಳೆದುಹೋಗಿದ್ದವು.
ತಾಯಿಯನ್ನು ನೋಡಬೇಕೆಂಬ ಆಸೆಯನ್ನು ಸುಶೀಲಾ ಅವರು ಮೊಮ್ಮಕ್ಕಳ ಬಳಿ ಆಗಾಗ ವ್ಯಕ್ತಪಡಿಸುತ್ತಿದ್ದರು. ಕೊನೆಗೂ ಅಜ್ಜಿಯ ಆಸೆಯನ್ನು ಈಡೇರಿಸಲು ನಿರ್ಧರಿಸಿದ ಮೊಮ್ಮಕ್ಕಳು, ಬೆಳಗಿನ ವೇಳೆ ಸುಶೀಲಾ ಅವರನ್ನು ಜೀಪಿನಲ್ಲಿ ಕಲ್ಲು-ಮಣ್ಣಿನ ಕಚ್ಚಾ ರಸ್ತೆಯಲ್ಲಿ ಕರೆದೊಯ್ದರು. ವಾಹನ ಸಾಗದ ಹಾದಿಯಲ್ಲಿ ನಿಧಾನವಾಗಿ ನಡೆಸಿಕೊಂಡು ಹೋಗಲಾಯಿತು. ಕಾಡಿನಲ್ಲಿ ಸಾಗುವಾಗ ಉಣ್ಣೆ/ಉಂಬುರು ಕಾಲಿನ ರಕ್ತ ಹೀರಿದರೂ, ತಾಯಿಯನ್ನು ನೋಡುವ ತವಕದಲ್ಲಿದ್ದ 85 ವರ್ಷದ ಸುಶೀಲಾ ಅವರಿಗೆ ಆ ನೋವು ಲೆಕ್ಕಕ್ಕೇ ಬರಲಿಲ್ಲ.
20 ವರ್ಷಗಳ ನಂತರ ತಾಯಿಯನ್ನು ಕಂಡ ಸುಶೀಲಾ ಅವರ ಕಣ್ಣಂಚಿನಲ್ಲಿ ಆನಂದಭಾಷ್ಪ ಹರಿಯಿತು. ವಯಸ್ಸಿನ ಕಾರಣದಿಂದ ಸೀತಮ್ಮ ಅವರ ನೆನಪುಗಳು ಮಸುಕಾಗಿದ್ದರೂ, ಮಗಳನ್ನು ಕಂಡ ಕ್ಷಣದಲ್ಲಿ ಪ್ರೀತಿ ಉಕ್ಕಿಬಂತು. ದಿನವಿಡೀ ತಾಯಿಯ ಜೊತೆಗಿದ್ದ ಮಗಳು, ವೀಳ್ಯದೆಲೆ ಅಗಿಯುತ್ತಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. ಅಜ್ಜಿಯನ್ನು ಮುತ್ತಜ್ಜಿಯ ಮನೆಗೆ ಕರೆದುಕೊಂಡು ಹೋಗುವುದು ನಮ್ಮ ಆಸೆಯಾಗಿತ್ತು. ರಸ್ತೆ ಇಲ್ಲದ ಕಾರಣ ತಡವಾಗಿತ್ತು. ಇದೀಗ ಇಬ್ಬರನ್ನೂ ಒಂದಾಗಿಸಿದ ಖುಷಿ ನಮಗಿದೆ” ಎಂದು ಮೊಮ್ಮಗ ಕೇಶವ ಸಂತಸ ಹಂಚಿಕೊಂಡಿದ್ದಾರೆ.