ಅಹಮದಾಬಾದ್: ಹಿಟ್ ಅಂಡ್ ರನ್ ಕೇಸ್ ಹಿಂದಿತ್ತು ಭೀಕರ ಮರ್ಯಾದಾ ಹ*ತ್ಯೆ – ಯುವತಿಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ತಂದೆ, ಸಹೋದರ ಬಂಧನ!”

ಅಹಮದಾಬಾದ್: ಗುಜರಾತ್ನ ಅಹಮದಾಬಾದ್ನಲ್ಲಿ ತಿಂಗಳ ಹಿಂದೆ ನಡೆದಿದ್ದ ‘ಹಿಟ್ ಅಂಡ್ ರನ್’ ಪ್ರಕರಣವೊಂದು ತನಿಖೆಯ ವೇಳೆ ಭೀಕರ ‘ಮರ್ಯಾದಾ ಹತ್ಯೆ (Honor Killing) ಎಂದು ಬಯಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ವೈರಲ್ ಆಗಿ ಕುಟುಂಬದ ಮಾನ ಹೋಯಿತೆಂದು ಕೆರಳಿದ್ದ ತಂದೆ ಹಾಗೂ ಸಹೋದರ ಸೇರಿ 22 ವರ್ಷದ ಯುವತಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿ, ಬಳಿಕ ಅಪಘಾತದ ಕಥೆ ಕಟ್ಟಿರುವುದು ತನಿಖೆಯಲ್ಲಿ ಸಾಬೀತಾಗಿದೆ.

ಆಸ್ಪತ್ರೆಯೊಂದರಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸೋಫಿಯಾ (22) ಕೊಲೆಯಾದ ದುರದೃಷ್ಟಕರ ಯುವತಿ. ಈ ಸಂಬಂಧ ಆಕೆಯ ತಂದೆ ಮೊಹಮ್ಮದ್ ಫಾರೂಕ್ ಹಾಗೂ ಸಹೋದರ ಮೊಹಮ್ಮದ್ ಹಬಿಲ್ (38) ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 12 ರ ರಾತ್ರಿ, ತಂದೆ ಫಾರೂಕ್ ಹಾಗೂ ಸಹೋದರ ಹಬಿಲ್ ಸೇರಿ ಸೋಫಿಯಾಳನ್ನು ಬೈಕ್ನಲ್ಲಿ ರೈಡ್ ಕರೆದೊಯ್ದಿದ್ದರು. ದಾರಿ ಮಧ್ಯೆ ಘೇಲ್ಜಿಪುರ ಗ್ರಾಮದ ಬಳಿಯ ಏಕಾಂತ ಮಣ್ಣಿನ ಹಾದಿಗೆ ಬೈಕ್ ತಿರುಗಿಸಿದ ಸಹೋದರ ಹಬಿಲ್, ತನ್ನ ಪ್ಯಾಂಟ್ನಲ್ಲಿ ಅಡಗಿಸಿಟ್ಟು ತಂದಿದ್ದ ಕಬ್ಬಿಣದ ಸುತ್ತಿಗೆಯಿಂದ ಸೋಫಿಯಾಳ ತಲೆಗೆ ಮೂರು ಬಾರಿ ಭೀಕರವಾಗಿ ಹೊಡೆದು ಕೊಲೆ ಮಾಡಿದ್ದಾನೆ.
ಬಳಿಕ ಕೃತ್ಯವನ್ನು ಮುಚ್ಚಿಹಾಕಲು, ಮೃತದೇಹವನ್ನು ಮುಖ್ಯ ರಸ್ತೆಗೆ ತಂದು ಹಾಕಿದ ತಂದೆ-ಮಗ, ಬೈಕನ್ನು ಜಖಂಗೊಳಿಸಿ ರಸ್ತೆ ಅಪಘಾತದಂತೆ ಬಿಂಬಿಸಿದ್ದರು. ನಂತರ ಹಬಿಲ್ ನೇರವಾಗಿ ಪೊಲೀಸರ ಬಳಿ ತೆರಳಿ, “ವೇಗವಾಗಿ ಬಂದ ವಾಹನವೊಂದು ನಮ್ಮ ಬೈಕಿಗೆ ಡಿಕ್ಕಿ ಹೊಡೆದಿದ್ದು, ತಂಗಿಯ ತಲೆಗೆ ಬಲವಾದ ಗಾಯವಾಗಿದೆ” ಎಂದು ಸುಳ್ಳು ಕಥೆ ಹೇಳಿದ್ದ. ತೀವ್ರ ಗಾಯಗೊಂಡಿದ್ದ ಸೋಫಿಯಾಳನ್ನು ಸೋಲಾ ಸಿವಿಲ್ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಮರುದಿನ ಆಕೆ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಳು.
ಘಟನೆ ಕುರಿತು ಸುದೀರ್ಘ ತನಿಖೆ ನಡೆಸಿದ ಪೊಲೀಸರಿಗೆ ಕುಟುಂಬದ ನಡವಳಿಕೆ ಮೇಲೆ ಅನುಮಾನ ಮೂಡಿ ತೀವ್ರ ವಿಚಾರಣೆಗೊಳಪಡಿಸಿದಾಗ ಅಸಲಿ ಸತ್ಯ ಬಯಲಾಗಿದೆ. ಸುಮಾರು ಮೂರು ತಿಂಗಳ ಹಿಂದೆ ಸೋಫಿಯಾ ವ್ಯಕ್ತಿಯೊಬ್ಬನ ಜೊತೆಗಿದ್ದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರಿಂದ ಸಮಾಜದಲ್ಲಿ ತಮ್ಮ ಕುಟುಂಬದ ಮಾನ ಹೋಯಿತೆಂದು ತಂದೆ ಹಾಗೂ ಸಹೋದರ ತೀವ್ರ ಅಸಮಾಧಾನಗೊಂಡಿದ್ದರು. ಕುಟುಂಬದ ಗೌರವ ರಕ್ಷಿಸುವ ನೆಪದಲ್ಲಿ ಆಕೆಯನ್ನು ಮುಗಿಸಲು ಯೋಜನೆ ರೂಪಿಸಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.