Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಮಂಗಳೂರು: ಬ್ಲಿಂಕಿಟ್‌ನಲ್ಲಿ ಆರ್ಡರ್ ಮಾಡಿದ ಮೊಟ್ಟೆಯಲ್ಲಿ ಕೊಳೆತ ಹುಳುಗಳು ಪತ್ತೆ;

Spread the love

ಮಂಗಳೂರು : ತ್ವರಿತ ದಿನಸಿ ಸರಬರಾಜು ಮಾಡುವ ಆನ್‌ಲೈನ್ ವೇದಿಕೆಯಾದ ‘ಬ್ಲಿಂಕಿಟ್’ (Blinkit) ಮೂಲಕ ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಮೊಟ್ಟೆಯ ಪ್ಯಾಕೆಟ್‌ನಲ್ಲಿ ಒಡೆದ, ಕೊಳೆತ ಮೊಟ್ಟೆ ಹಾಗೂ ಹುಳುಗಳು ಪತ್ತೆಯಾದ ದೂರಿನ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ನಗರದ ಫಳ್ನೀರ್‌ನಲ್ಲಿರುವ ಬ್ಲಿಂಕಿಟ್ ಗೋಡೌನ್‌ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.
ತಪಾಸಣೆ ವೇಳೆ ಭಾರಿ ಪ್ರಮಾಣದ ನೈರ್ಮಲ್ಯ ಕೊರತೆ ಹಾಗೂ ಅವ್ಯವಸ್ಥೆ ಬೆಳಕಿಗೆ ಬಂದಿದ್ದು, ಆಹಾರ ಸಂಗ್ರಹಣಾ ಕೊಠಡಿಯನ್ನು ತಾತ್ಕಾಲಿಕವಾಗಿ ಮುಚ್ಚಿಸಿ ಸೀಜ್ ಮಾಡಲಾಗಿದೆ ಎಂದು ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಖಚಿತಪಡಿಸಿದ್ದಾರೆ.

ಮಂಗಳೂರಿನ ಹಂಪನಕಟ್ಟೆ ನಿವಾಸಿ ಅಬ್ದುಲ್ ರಹಮಾನ್ ಎಂಬ ಗ್ರಾಹಕರು ಸೆಪ್ಟೆಂಬರ್ 1ರಂದು ಬ್ಲಿಂಕಿಟ್ ಆ್ಯಪ್ ಮೂಲಕ ಮೊಟ್ಟೆ ಆರ್ಡರ್ ಮಾಡಿದ್ದರು. ಡೆಲಿವರಿಯಾದ ‘ಚಿಕೋ ವೈಟ್ ಎಗ್ಸ್’ ಪ್ಯಾಕೆಟ್ ಒಡೆದು ಹೋಗಿದ್ದು, ಅದರೊಳಗೆ ಹುಳುಗಳು ಕಂಡುಬಂದಿದ್ದವು. ಈ ಕಳಪೆ ಹಾಗೂ ಅನೈರ್ಮಲ್ಯಯುತ ಸೇವೆಯ ಬಗ್ಗೆ ಅವರು ನೇರವಾಗಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಲಿಖಿತ ದಾಖಲೆ ಮತ್ತು ಫೋಟೋ ಸಮೇತ ದೂರು ಸಲ್ಲಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಸಚಿವರು, ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದರು.
ಸಚಿವರ ಸೂಚನೆ ಮೇರೆಗೆ ಮಂಗಳೂರಿನ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್​ ಹಾಗೂ ಸಿಬ್ಬಂದಿಗಳ ತಂಡವು ಫಳ್ನೀರ್​ ಸ್ಕ್ವೇರ್​ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಲಿಂಕಿಟ್‌ನ ‘ಡಾರ್ಕ್ ಸ್ಟೋರ್’ (Dark Store) ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿತು.

ತಪಾಸಣೆಯ ವೇಳೆ ಗೋಡೌನ್‌ನ ರಾಕ್‌ಗಳಲ್ಲಿ ಮಾರಾಟಕ್ಕೆ ಇರಿಸಲಾಗಿದ್ದ ಹಲವು ಮೊಟ್ಟೆಯ ಟ್ರೇ ಹಾಗೂ ಪ್ಯಾಕೆಟ್‌ಗಳಲ್ಲಿ ಒಡೆದ ಮತ್ತು ಕೊಳೆತ ಮೊಟ್ಟೆಗಳು ಪತ್ತೆಯಾಗಿದ್ದು, ಅಧಿಕಾರಿಗಳು ತಕ್ಷಣವೇ ಅವುಗಳನ್ನು ತೆರವುಗೊಳಿಸಲು ಸೂಚಿಸಿದರು. ಅಲ್ಲದೆ, ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಿಡುವ ಜಾಗದಲ್ಲಿ ನಿಯಮಾನುಸಾರ ನೈರ್ಮಲ್ಯ ಕಾಪಾಡದಿರುವುದು ಪರಿಶೀಲನೆ ವೇಳೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಡೀ ಮಳಿಗೆ ಹಾಗೂ ಸಂಗ್ರಹಣಾಗಾರವನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಕೊಠಡಿಯನ್ನು ಸೀಜ್ ಮಾಡಲಾಗಿದೆ.

ಈ ಗಂಭೀರ ಲೋಪಕ್ಕೆ ಸಂಬಂಧಿಸಿದಂತೆ ಬ್ಲಿಂಕಿಟ್ ಸಂಸ್ಥೆಗೆ ಆಹಾರ ಸುರಕ್ಷತಾ ಕಾಯ್ದೆಯಡಿ ಅಧಿಕೃತ ನೋಟಿಸ್ ಜಾರಿಗೊಳಿಸಲಾಗಿದ್ದು, ನಿಯಮ ಉಲ್ಲಂಘನೆ ಕುರಿತು ಸೂಕ್ತ ಸಮಜಾಯಿಷಿ ನೀಡುವಂತೆ ಅಧಿಕಾರಿಗಳು ತಾಕೀತು ಮಾಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *