ಬೆಂಗಳೂರು: ಅಗರ ಕೆರೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ಚಿತ್ರೀಕರಿಸುತ್ತಿದ್ದ ಕಾಮುಕ ಸಿಕ್ಕಿಬಿದ್ದು ಕ್ಷಮೆಯಾಚನೆ!

ಬೆಂಗಳೂರು: ನಗರದ ಅಗರ ಕೆರೆಯಲ್ಲಿ ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದ ಆರೋಪದಲ್ಲಿ ಯುವಕನೊಬ್ಬ ಸ್ಥಳೀಯರ ಕೈಗೆ ಸಿಕ್ಕಿಬಿದ್ದಿದ್ದಾನೆ. ಘಟನೆ ನಿನ್ನೆ ಬೆಳಗ್ಗೆ ನಡೆದಿದ್ದು, ಯುವಕನ ಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಎಂದಿನಂತೆ ಬೆಳಗ್ಗೆ ಅಗರ ಕೆರೆಯಲ್ಲಿ ಮಹಿಳೆಯೊಬ್ಬರು ಜಾಗಿಂಗ್ ಮಾಡುತ್ತಿದ್ದರು. ಈ ವೇಳೆ ಅಲ್ಲಿದ್ದ ಯುವಕನೊಬ್ಬ ಮಹಿಳೆಯರ ವಿಡಿಯೋವನ್ನು ರೆಕಾರ್ಡ್ ಮಾಡುತ್ತಿದ್ದಾನೆ ಎಂಬುದು ಗಮನಕ್ಕೆ ಬಂದಿದೆ. ಇದನ್ನು ಕಂಡ ಮಹಿಳೆ ಕೂಡಲೇ ಯುವಕನನ್ನು ಪ್ರಶ್ನಿಸಿದ್ದಾರೆ. ಬಳಿಕ ಸ್ಥಳೀಯರಿಗೆ ಮಾಹಿತಿ ನೀಡಲಾಗಿದ್ದು, ಯುವಕನನ್ನು ಹಿಡಿದು ಆತನ ಮೊಬೈಲ್ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ಮೊಬೈಲ್ನಲ್ಲಿ ಹಲವು ಮಹಿಳೆಯರ ವಿಡಿಯೋಗಳು ಇರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ. ಯುವಕನ ಕೃತ್ಯದಿಂದ ಆಕ್ರೋಶಗೊಂಡ ಸ್ಥಳೀಯರು ಆತನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಯುವಕ ಮಹಿಳೆಯ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ ಎನ್ನಲಾಗಿದೆ.
ಈ ಘಟನೆ ಕುರಿತು ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಯುವಕನ ವಿರುದ್ಧ ದೂರು ನೀಡಲಾಗಿದೆ. ಸರ್ಜಾಪುರ ನಿವಾಸಿ ಕುಮಾರ್ ಎಂಬಾತನ ವಿರುದ್ಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಖಾಸಗಿತನಕ್ಕೆ ಧಕ್ಕೆ ತರುವ ರೀತಿಯಲ್ಲಿ ವಿಡಿಯೋ ಚಿತ್ರೀಕರಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.