ಮಂಗಳೂರು: ಆಟೋ ರಿಕ್ಷಾ ಪ್ರಯಾಣ ದರ ಪರಿಷ್ಕರಿಸಿ RTO ಆದೇಶ; ನಾಳೆಯಿಂದಲೇ ನೂತನ ದರ ಜಾರಿ!

ಮಂಗಳೂರು: ಇಂಧನ ಬೆಲೆ ಹಾಗೂ ವಾಹನ ಬಿಡಿಭಾಗಗಳ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾದ್ಯಂತ ಆಟೋ ರಿಕ್ಷಾ ಪ್ರಯಾಣ ದರವನ್ನು ಪರಿಷ್ಕರಿಸಿ ಜಿಲ್ಲಾ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (RTO) ಅಧಿಕೃತ ಆದೇಶ ಹೊರಡಿಸಿದೆ. ನೂತನ ಪ್ರಯಾಣ ದರಗಳು ನಾಳೆಯಿಂದ (ಸೆಪ್ಟೆಂಬರ್ 1) ಜಾರಿಗೆ ಬರಲಿವೆ.

ಜಿಲ್ಲಾಧಿಕಾರಿ ಹಾಗೂ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾದ ದರ್ಶನ್ ಎಚ್.ವಿ. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಟೋ ಚಾಲಕ-ಮಾಲೀಕರ ಸಂಘಟನೆಗಳ ದೀರ್ಘಕಾಲದ ಬೇಡಿಕೆ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪರಿಷ್ಕೃತ ದರವನ್ನು ನಿಗದಿಪಡಿಸಲಾಗಿದೆ.
ಪರಿಷ್ಕೃತ ಆಟೋ ದರಗಳ ವಿವರ:
ಕನಿಷ್ಠ ಪ್ರಯಾಣ ದರ (ಮೊದಲ 1.5 ಕಿ.ಮೀ): ರೂ 40.00 (ಗರಿಷ್ಠ 3 ಜನ ಪ್ರಯಾಣಿಕರಿಗೆ). (ಹಿಂದೆ ರೂ 35 ಇತ್ತು)
ನಂತರದ ಪ್ರತಿ ಕಿಲೋಮೀಟರ್ ದರ: ರೂ 20.00 (ಗರಿಷ್ಠ 3 ಜನ ಪ್ರಯಾಣಿಕರಿಗೆ). (ಹಿಂದೆ ರೂ 17 ಇತ್ತು)
ಕಾಯುವಿಕೆ ದರ (Waiting Charges): ಮೊದಲ 10 ನಿಮಿಷ ಉಚಿತ. ನಂತರದ ಪ್ರತಿ 15 ನಿಮಿಷದವರೆಗೆ ರೂ 5.00.
ಪ್ರಯಾಣಿಕರ ಸರಕು ದರ (Luggage Charges): ಒಬ್ಬ ಪ್ರಯಾಣಿಕ ಕಡ್ಡಾಯವಾಗಿ ಜೊತೆಗಿರಬೇಕು.
ಮೊದಲ 20 ಕೆ.ಜಿ.ವರೆಗೆ ಉಚಿತ. ನಂತರದ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ ರೂ 5
ರಾತ್ರಿ ವೇಳೆ ದರ (Night Charges): ರಾತ್ರಿ 10:00 ಗಂಟೆಯಿಂದ ಬೆಳಗಿನ ಜಾವ 05:00 ಗಂಟೆಯವರೆಗೆ ಸಾಮಾನ್ಯ ದರದ ಒಂದೂವರೆ ಪಟ್ಟು (1.5 Times) ದರವನ್ನು ಪಡೆಯಲು ಅವಕಾಶವಿದೆ.
ಸಾರ್ವಜನಿಕರು ಹಾಗೂ ಆಟೋ ಚಾಲಕರಿಗೆ ಪ್ರಮುಖ ಸೂಚನೆಗಳು:
ದರಪಟ್ಟಿ ಪ್ರದರ್ಶನ ಕಡ್ಡಾಯ: ಆರ್‌ಟಿಒ ಅನುಮೋದಿಸಿದ ನೂತನ ದರಪಟ್ಟಿಯನ್ನು ಪ್ರತಿಯೊಂದು ಆಟೋ ರಿಕ್ಷಾದಲ್ಲಿ ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಕಡ್ಡಾಯವಾಗಿ ಪ್ರದರ್ಶಿಸಬೇಕು.
ಮೀಟರ್ ರಿಕ್ಯಾಲಿಬ್ರೇಶನ್: ಆಟೋ ಚಾಲಕರು ಮತ್ತು ಮಾಲೀಕರು ತಮ್ಮ ಡಿಜಿಟಲ್ ಮೀಟರ್‌ಗಳನ್ನು ನಿಗದಿತ ಅವಧಿಯೊಳಗೆ ಮರುಪರಿಶೀಲಿಸಿ (Recalibration) ಸೀಲ್ ಮಾಡಿಸಿಕೊಳ್ಳಬೇಕು.
ಹೆಚ್ಚುವರಿ ದರ ವಸೂಲಿಗೆ ಕಟ್ಟುನಿಟ್ಟಿನ ಕ್ರಮ: ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡಿದರೆ ಅಥವಾ ನಿಯಮ ಉಲ್ಲಂಘಿಸಿದರೆ ಕಾನೂನುಬದ್ಧವಾಗಿ ದಂಡ ವಿಧಿಸುವುದು, ಪರವಾನಗಿ (Permit) ಅಮಾನತುಗೊಳಿಸುವುದು ಹಾಗೂ ರದ್ದುಪಡಿಸುವಂತಹ ಕಠಿಣ ಕ್ರಮಗಳನ್ನು ಜರುಗಿಸಲಾಗುವುದು ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.