ಪುಣೆಯ ಪಿಂಪ್ರಿ-ಚಿಂಚ್‌ವಾಡ್‌ನಲ್ಲಿ ಬೀದಿ ನಾಯಿ ದಾಳಿಯಿಂದ ಕೆಳಗೆ ಬಿದ್ದು ಗಾಯಗೊಂಡ ಒಂದು ವರ್ಷದ ಕಂದಮ್ಮ.

ಪುಣೆ: ಮಹಾರಾಷ್ಟ್ರದ ಪುಣೆ ಸಮೀಪದ ಪಿಂಪ್ರಿ-ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (PCMC) ವ್ಯಾಪ್ತಿಯ ಓಲ್ಡ್ ಸಾಂಗ್ವಿಯಲ್ಲಿ ಬೀದಿ ನಾಯಿ(Dog)ಯೊಂದು ಮಹಿಳೆಯ ಮೇಲೆ ಏಕಾಏಕಿ ದಾಳಿ ನಡೆಸಿದ ಪರಿಣಾಮ, ಆಕೆಯ ಕೈಯಲ್ಲಿದ್ದ ಒಂದು ವರ್ಷದ ಕಂದಮ್ಮ ನೆಲಕ್ಕೆ ಬಿದ್ದು ಗಾಯಗೊಂಡಿರುವ ಆಘಾತಕಾರಿ ಘಟನೆ ನಡೆದಿದೆ.
ಬುಧವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಮಧುಬನ್ ಹೌಸಿಂಗ್ ಸೊಸೈಟಿ ಬಳಿ ನಡೆದಿರುವ ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾಗರಿಕರಲ್ಲಿ ಭಾರಿ ಆತಂಕ ಮೂಡಿಸಿದೆ. ಮಹಿಳೆ ತನ್ನ ಮಗುವನ್ನು ಎತ್ತಿಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಕಾರಿನ ಹಿಂದಿನಿಂದ ಬಂದ ಎರಡು ನಾಯಿಗಳಲ್ಲಿ ಒಂದು ನಾಯಿ ಆಕೆಯ ಕಾಲನ್ನು ಕಚ್ಚಿದೆ.
ನಾಯಿ ಕಡಿತದ ನೋವು ಮತ್ತು ಭಯದಿಂದ ಮಹಿಳೆ ನಿಯಂತ್ರಣ ತಪ್ಪಿ ಬಿದ್ದಿದ್ದು, ಈ ವೇಳೆ ಕೈಯಲ್ಲಿದ್ದ ಒಂದು ವರ್ಷದ ಕಂದಮ್ಮ ರಸ್ತೆಗೆ ಅಪ್ಪಳಿಸಿದೆ. ಗಾಯಗೊಂಡ ತಾಯಿ ಮತ್ತು ಮಗುವಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಮತ್ತು ಆ್ಯಂಟಿ-ರೇಬಿಸ್ ಲಸಿಕೆ ನೀಡಲಾಗಿದೆ. ಪಿಸಿಎಂಸಿ ಅಧಿಕೃತ ಅಂಕಿಅಂಶಗಳ ಪ್ರಕಾರ, 2021-22ರಲ್ಲಿ 13,800 ರಷ್ಟಿದ್ದ ನಾಯಿ ಕಡಿತ ಪ್ರಕರಣಗಳ ಸಂಖ್ಯೆಯು 2025-26ರಲ್ಲಿರ ವೇಳೆಗೆ ಬರೋಬ್ಬರಿ 38 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಗೆ ಏರಿಕೆಯಾಗಿದೆ.ಇತ್ತೀಚೆಗೆ ಚಿಖಾಲಿ ಪ್ರದೇಶದಲ್ಲಿ 5 ವರ್ಷದ ಬಾಲಕಿಯೊಬ್ಬಳ ಮೇಲೆ 7 ನಾಯಿಗಳ ಹಿಂಡು ದಾಳಿ ನಡೆಸಿದ್ದು, ಆಕೆಗೆ 80 ಕ್ಕೂ ಹೆಚ್ಚು ಹೊಲಿಗೆಗಳನ್ನು ಹಾಕಲಾಗಿತ್ತು.
ಪ್ರಾಣಿಗಳ ಜನನ ನಿಯಂತ್ರಣ ನಿಯಮಗಳ ಅಡಿಯಲ್ಲಿ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮತ್ತು ರೇಬಿಸ್ ವಿರೋಧಿ ಲಸಿಕೆ ಕಾರ್ಯಕ್ರಮಗಳನ್ನು ಪಾಲಿಕೆ ಸಮರ್ಪಕವಾಗಿ ಜಾರಿಗೊಳಿಸದಿರುವುದೇ ಈ ಹಾವಳಿಗೆ ಮುಖ್ಯ ಕಾರಣವೆಂದು ಪ್ರಾಣಿ ಕಲ್ಯಾಣ ಕಾರ್ಯಕರ್ತರು ಆರೋಪಿಸಿದ್ದಾರೆ.ಕಾನೂನು ಮತ್ತು ಸುರಕ್ಷತಾ ಮಾರ್ಗಸೂಚಿ: ಸುಪ್ರೀಂ ಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮಕ್ಕಳ ಮತ್ತು ವೃದ್ಧರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಕ್ರಮಣಕಾರಿ ನಾಯಿಗಳನ್ನು ಪ್ರತ್ಯೇಕಿಸಿ ತುರ್ತು ಕ್ರಮ ಕೈಗೊಳ್ಳುವಂತೆ ನಿವಾಸಿಗಳು ಪಾಲಿಕೆಗೆ ಒತ್ತಾಯಿಸಿದ್ದಾರೆ.
