ಸುಳ್ಯ: ರಸ್ತೆ ಬದಿ ನಿಂತಿದ್ದ ಟೆಂಪೋ ಟಿಟಿ ಮೇಲೆ ಮಗುಚಿಬಿದ್ದ ಲಾರಿ; ಮೂವರಿಗೆ ಗಂಭೀರ ಗಾಯ!

ಸುಳ್ಯ : ರಸ್ತೆ ಬದಿ ನಿಲ್ಲಿಸಿದ್ದ ಟೆಂಪೋ ಟಿಟಿ (Tempo Traveller) ವಾಹನದ ಮೇಲೆ ಲಾರಿಯೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ ಪ್ರಯಾಣಿಕರು ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ದೇವರಕೊಲ್ಲಿ ಸಮೀಪದ ಅಬ್ಬಿ ಫಾಲ್ಸ್ ಬಳಿ ಬುಧವಾರ (ಆಗಸ್ಟ್ 26) ಸಂಜೆ ಸಂಭವಿಸಿದೆ.

ಗುಜರಾತ್‌ನ ಅಹಮದಾಬಾದ್ ಮೂಲದ ಪ್ರವಾಸಿಗರು ಮಡಿಕೇರಿ ಕಡೆಯಿಂದ ಮಂಗಳೂರಿನತ್ತ ಟೆಂಪೋ ಟಿಟಿಯಲ್ಲಿ ಪ್ರಯಾಣಿಸುತ್ತಿದ್ದರು. ದೇವರಕೊಲ್ಲಿ ಸಮೀಪದ ಅಬ್ಬಿ ಫಾಲ್ಸ್ ಬಳಿ ವಿಶ್ರಾಂತಿಗಾಗಿ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿತ್ತು. ಇದೇ ವೇಳೆ ಅದೇ ಮಾರ್ಗವಾಗಿ ಸುಳ್ಯದ ಕಡೆಗೆ ಬರುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಟಿಟಿ ವಾಹನದ ಮೇಲೆಯೇ ಮಗುಚಿ ಬಿದ್ದಿದೆ.
ಅಪಘಾತ ಸಂಭವಿಸಿದ ವೇಳೆ ಟಿಟಿ ವಾಹನದಲ್ಲಿ ಒಟ್ಟು 7 ಜನ ಪ್ರಯಾಣಿಕರಿದ್ದರು. ಘಟನೆಯಲ್ಲಿ ಟಿಟಿಯಲ್ಲಿದ್ದ ಓರ್ವ ಪ್ರಯಾಣಿಕ, ಲಾರಿ ಚಾಲಕ ಹಾಗೂ ಕ್ಲೀನರ್ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ವಾಹನಗಳು ಜಖಂಗೊಂಡಿದ್ದು, ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ಆಂಬುಲೆನ್ಸ್ ಮೂಲಕ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕ್ರೇನ್ ಸಹಾಯದಿಂದ ಮಗುಚಿ ಬಿದ್ದಿದ್ದ ಲಾರಿಯನ್ನು ಮೇಲಕ್ಕೆತ್ತಿ ಸಂಚಾರ ಸುಗಮಗೊಳಿಸಿದ್ದಾರೆ.