ವಿಜಯಪುರ: ಭೂತನಾಳ ಕೆರೆಯಲ್ಲಿ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಪತ್ತೆ!

ವಿಜಯಪುರ: ನಗರ ಹೊರವಲಯದಲ್ಲಿರುವ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಇಂದು ಬೆಳಗ್ಗೆ ತಾಯಿ ಹಾಗೂ ಐವರು ಮಕ್ಕಳ ಮೃತದೇಹಗಳು ಪತ್ತೆಯಾಗಿರುವ ಬೆಚ್ಚಿ ಬೀಳಿಸುವ ಘಟನೆ ವರದಿಯಾಗಿದೆ.
ಮೃತರನ್ನು ವಿಜಯಪುರ ತಾಲೂಕಿನ ತೊರವಿ ಗ್ರಾಮದ ನಿವಾಸಿ ಮಲಕಾರಿ ಭೀಮರಾಯ ಜಾಲಗೇರಿ ಎಂಬವರ ಪತ್ನಿ ಶೋಭಾ ಜಾಲಗೇರಿ(45), ಅವರ ಮಕ್ಕಳಾದ ವಿದ್ಯಾ (16), ಸುವರ್ಣ(14), ಗೌಡೇಶ್ (ಮೂಗು(10), ವಿಕಾಸ (5) ಹಾಗೂ ಸಾನಿಕಾ (7) ಎಂದು ಗುರುತಿಸಲಾಗಿದೆ. ಇವರು ಆ.24ರಂದು ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಘಟನೆ ವಿವರ: 322 ಎಕರೆ ವಿಸ್ತೀರ್ಣದ ವಿಶಾಲವಾದ ಭೂತನಾಳ ಕೆರೆಯಲ್ಲಿ ಇಂದು ಬೆಳಗ್ಗೆ ಆರು ಮೃತದೇಹಗಳು ಪತ್ತೆಯಾಗಿದೆ.
ಮುಂಜಾನೆ ವಾಕಿಂಗ್ ಹೊರಟಿದ್ದ ಸ್ಥಳೀಯರು ಕೆರೆಯಲ್ಲಿ ಮೃತದೇಹ ತೇಲುತ್ತಿರುವುದು ಮೊದಲು ನೋಡಿದ್ದಾರೆ. ಕೆರೆಯ ಬಳಿ ಹೋಗಿ ನೋಡಿದಾಗ ಕೆರೆಯ ಅಂಚಿನಲ್ಲಿ ಆರು ಮೃತದೇಹಗಳಿರುವುದನ್ನು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ದಳದವರು ಆಗಮಿಸಿದ್ದು, ಮೃತದೇಹಗಳನ್ನು ಮೇಲಕ್ಕೆತ್ತಿದ್ದಾರೆ.
ಸ್ಥಳಕ್ಕೆ ನಗರ ಡಿವೈಎಸ್ಪಿ ನಾಗಾರಾಜ, ಆದರ್ಶ ನಗರ ಪಿಎಸ್ಸೆ ಸೀತಾರಾಮ ಲಮಾಣಿ ಹಾಗೂ ಸಿಬ್ಬಂದಿ ಭೇಟಿ ತನಿಖೆ ಕೈಗೆತ್ತಿಕೊಂಡಿದ್ದಾರೆ.
