ಉಡುಪಿ: ಮಲ್ಪೆ ಬಂದರಿನ ಮೀನುಗಾರಿಕಾ ಬೋಟ್‌ನಲ್ಲಿ ಭೀಕರ ಕೊಲೆ; ಚೂರಿ ಇರಿತಕ್ಕೆ ಕಾರ್ಮಿಕ ಬಲಿ!

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಮರ್ಡರ್ ಪ್ರಕರಣ ದಾಖಲಾಗಿದೆ. ಮಲ್ಪೆ ಬಂದರಿನಲ್ಲಿ ಲಂಗರು ಹಾಕಲಾಗಿದ್ದ ಮೀನುಗಾರಿಕಾ ಬೋಟ್ ಒಂದರ ಕ್ಯಾಬಿನ್‌ನಲ್ಲಿ ಮೀನುಗಾರ ಕಾರ್ಮಿಕರಿಬ್ಬರ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ಒಬ್ಬಾತ ಚೂರಿ ಇರಿತದಿಂದ ಸಾವನ್ನಪ್ಪಿರುವ ಘಟನೆ ಮಂಗಳವಾರ (ಆಗಸ್ಟ್ 25) ನಡೆದಿದೆ.

ಚಿಕ್ಕಮಗಳೂರು ಮೂಲದ ಅಭಿಷೇಕ್ ಮೃತಪಟ್ಟ ದುರ್ದೈವಿ. ಕೃತ್ಯ ಎಸಗಿದ ಆರೋಪಿ ಗೋವಿಂದ ಎಂಬಾತ ಘಟನೆ ನಡೆದ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾನೆ. ಬೋಟ್‌ನ ಕ್ಯಾಬಿನ್ ಒಳಗೆ ಇಬ್ಬರ ನಡುವೆ ಯಾವ ಕಾರಣಕ್ಕೆ ಜಗಳ ನಡೆದಿದೆ ಎಂಬುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಘಟನೆಯ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಹಿತಿ ಪಡೆದ ತಕ್ಷಣ ಮಲ್ಪೆ ಪೊಲೀಸ್ ಠಾಣಾ ಪೊಲೀಸರು ಆರೋಪಿ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿದ್ದರು. ಆರೋಪಿ ಗೋವಿಂದ ಹೈದರಾಬಾದ್ ಅಥವಾ ಮುಂಬೈ ಕಡೆ ಹೋಗಲು ಉಡುಪಿ ರೈಲೆ ನಿಲ್ದಾಣದ ಮೂಲಕ ಪರಾರಿಯಾಗಲು ಯತ್ನಿಸಿದ್ದನು. ತಕ್ಷಣ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗೋವಿಂದ ಸುಮಾರು 15 ವರ್ಷಗಳಿಂದ ಮನೆಗೆ ಹೋಗದೇ ಮುಂಬೈ ಹೈದರಾಬಾದ್ ಹಾಗೂ ಇತರ ಕಡೆಗಳಲ್ಲಿ ಕೆಲಸ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಆರೋಪಿಯನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು, ಕೊಲೆಗೆ ನಿಖರವಾದ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.