ಕುರುಕ್ಷೇತ್ರ: ಪತಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ; ಸಿಕ್ಕಿಬೀಳುವ ಭಯದಿಂದ ಮಹಡಿಯಿಂದ ಕೆಳಗೆ ಹಾರಿದ ಪತ್ನಿ!

ಚಂಡೀಗಢ: ಮಹಿಳೆಯೊಬ್ಬಳು ತನ್ನ ಪತಿಗೆ ಹಲವು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಈ ವೇಳೆ ಮನೆ ಮಾಲೀಕ ಬಂದಿದ್ದನ್ನು ಕಂಡು ಗಾಬರಿಗೊಂಡ ಆಕೆ, ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಕೆಳಗೆ ಬಿದ್ದ ಪರಿಣಾಮ ಗಾಯಗೊಂಡಿರುವ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತನನ್ನು ಉತ್ತರ ಪ್ರದೇಶ ಮೂಲದ ರಾಜೇಶ್ (40) ಎಂದು ಗುರುತಿಸಲಾಗಿದೆ. ಆತನ ಪತ್ನಿ ವಿಮಲಾ ಆರೋಪಿ.
ದಂಪತಿ ಸುಮಾರು ಒಂದು ವರ್ಷದಿಂದ ಕುರುಕ್ಷೇತ್ರದ ರಿಂಕು ಎಂಬುವವರ ಮನೆಯ ಮೇಲ್ಮಹಡಿಯ ಕೊಠಡಿಯಲ್ಲಿ ಬಾಡಿಗೆಗೆ ವಾಸವಾಗಿದ್ದರು.

ರಾಜೇಶ್ ಅವರ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ಹೊಟ್ಟೆಯ ಭಾಗದಲ್ಲಿ ಸುಮಾರು 35 ಸೆಂಟಿಮೀಟರ್ ಆಳದ ಗಾಯ ಕಂಡುಬಂದಿದೆ.
ಸಂಜೆ 5 ಗಂಟೆಗೆ ರಾಜೇಶ್ ಮತ್ತು ವಿಮಲಾ ಪರಸ್ಪರ ಕಿರುಚಾಡಿಕೊಳ್ಳುತ್ತಿದ್ದ ಶಬ್ದ ಕೇಳಿ ಮನೆ ಮಾಲೀಕ ರಿಂಕು ಮೇಲಕ್ಕೆ ‘ತೆರಳಿದ್ದಾರೆ. ಅಲ್ಲಿ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮನೆ ಮಾಲೀಕನನ್ನು ನೋಡುತ್ತಿದ್ದಂತೆಯೇ ವಿಮಲಾ ಗಾಬರಿಗೊಂಡು ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಕೆಳಗೆ ಬಿದ್ದ ಪರಿಣಾಮ ಆಕೆಯೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳದಿಂದ ಪೊಲೀಸರು ಮೂರು ಚಾಕುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಮಲಾ ವಾಮಾಚಾರ ಮಾಡುತ್ತಿದ್ದಳು ಹಾಗೂ ದಂಪತಿಯ ನಡುವೆ ಆಗಾಗ್ಗೆ ಜಗಳಗಳು ನಡೆಯುತ್ತಿದ್ದವು ಎಂದು ಮನೆ ಮಾಲೀಕ ರಿಂಕು ಆರೋಪಿಸಿದ್ದಾರೆ.
ದಂಪತಿಗೆ ಮದುವೆಯಾಗಿ ಹಲವು ವರ್ಷಗಳಾಗಿದ್ದರೂ ಮಕ್ಕಳಿರಲಿಲ್ಲ ಎಂದು ತಿಳಿದುಬಂದಿದೆ. ಹತ್ಯೆಗೆ ನಿಖರ ಕಾರಣವೇನು ಹಾಗೂ ದಂಪತಿಯ ನಡುವಿನ ದಾಂಪತ್ಯ ಕಲಹದ ಹಿನ್ನೆಲೆ ಏನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.