ಬೆಂಗಳೂರು: ಬೈಕ್ ಮೇಲೆ ಹರಿದ ವಾಟರ್ ಟ್ಯಾಂಕರ್; ವೈರಲ್ ವಿಡಿಯೋ ಬೆನ್ನಲ್ಲೇ ಚಾಲಕ ಬಂಧನ!

ಬೆಂಗಳೂರು: ನಗರದ ವರ್ತೂರು ವ್ಯಾಪ್ತಿಯ ಗುಂಜೂರು-ಪಾಳ್ಯ ಸಿಡಿಪಿ ರಸ್ತೆಯಲ್ಲಿ ಭೀಕರ ಅಪಘಾತಕ್ಕೆ ಕಾರಣವಾದ ವಾಟರ್ ಟ್ಯಾಂಕರ್ ಚಾಲಕನನ್ನು ಬೆಂಗಳೂರು ಸಂಚಾರ ಪೊಲೀಸರು ಬಂಧಿಸಿದ್ದು, ಟ್ಯಾಂಕರ್ ವಾಹನವನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ಹೌದು.. ಬೆಂಗಳೂರಿನ ಗುಂಜೂರು-ಪಾಳ್ಯ ಸಿಡಿಪಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ವೇಗವಾಗಿ ಬಂದ ನೀರಿನ ಟ್ಯಾಂಕರ್ ವೊಂದು ಬೈಕ್ ಮೇಲೆ ಹರಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿತ್ತು. ಈ ಘಟನೆಯಲ್ಲಿ ಅದೃಷ್ಟವಶಾತ್ ಬೈಕ್ ಸವಾರ ಬೈಕ್ ನಿಂದ ಹಾರಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಎಚ್ಚೆತ್ತಿದ್ದ ಬೆಂಗಳೂರಿನ ವೈಟ್‌ಫೀಲ್ಡ್ ಸಂಚಾರ ಪೊಲೀಸರು ಇದೀಗ ಟ್ಯಾಂಕರ್ ಚಾಲಕನನ್ನು ಬಂಧಿಸಿದ್ದು ಮಾತ್ರವಲ್ಲದೇ ಟ್ಯಾಂಕರ್ ವಾಹನವನ್ನೂ ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಟ್ಯಾಂಕರ್ ಅನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ಸ್ಥಳಾಂತರಿಸಲಾಗಿದೆ.
