ಅಮೆರಿಕ: ಚಿಕಾಗೋ ಹಾಗೂ ಇಂಡಿಯಾನಾದಲ್ಲಿ ಭೀಕರ ಬಿರುಗಾಳಿ ಅಬ್ಬರ; ಓರ್ವ ಸಾ*ವು, 5 ಲಕ್ಷಕ್ಕೂ ಅಧಿಕ ಮಂದಿಗೆ ವಿದ್ಯುತ್ ಕಟ್!

ಚಿಕಾಗೋ: ಅಮೆರಿಕದ ಮಧ್ಯಪಶ್ಚಿಮ ಭಾಗದಲ್ಲಿ ಮಂಗಳವಾರ ಬೀಸಿದ ಭೀಕರ ಬಿರುಗಾಳಿ ವ್ಯಾಪಕ ಹಾನಿ ಉಂಟುಮಾಡಿದೆ. ಚಿಕಾಗೋ ಪ್ರದೇಶ ಹಾಗೂ ವಾಯುವ್ಯ ಇಂಡಿಯಾನಾದಲ್ಲಿ ಬಿರುಗಾಳಿಯ ಅಬ್ಬರಕ್ಕೆ ಮನೆಗಳು ಹಾನಿಗೊಳಗಾಗಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ದುರಂತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, 5 ಲಕ್ಷಕ್ಕೂ ಹೆಚ್ಚು ಜನರು ವಿದ್ಯುತ್ ಸಂಪರ್ಕ ಕಳೆದುಕೊಂಡಿದ್ದಾರೆ.

ಚಿಕಾಗೋದಿಂದ ಸುಮಾರು 30 ಮೈಲಿ ದೂರದಲ್ಲಿರುವ ಇಂಡಿಯಾನಾದ ಪೋರ್ಟೇಜ್ನಲ್ಲಿ ಮನೆಗೆ ಬೆಂಕಿ ಹೊತ್ತಿಕೊಂಡು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಬಿರುಗಾಳಿಯಿಂದ ಉಂಟಾದ ಅವಶೇಷಗಳು ಹಾಗೂ ಭಾರೀ ಹಾನಿಯ ಕಾರಣ ಅಗ್ನಿಶಾಮಕ ಸಿಬ್ಬಂದಿಗೆ ತಕ್ಷಣ ಸ್ಥಳಕ್ಕೆ ತಲುಪಲು ಸಾಧ್ಯವಾಗಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದು ಇನ್ನೂ ತನಿಖೆಯಲ್ಲಿದ್ದು, ಪ್ರತಿಕೂಲ ಹವಾಮಾನ ಪರಿಸ್ಥಿತಿಯೇ ಇದಕ್ಕೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.ಪೋರ್ಟೇಜ್ ಪೊಲೀಸ್ ಕ್ಯಾಪ್ಟನ್ ರಾಬ್ ಮೇನಾರ್ಡ್, ತಮ್ಮ 50 ವರ್ಷಗಳ ಜೀವನದಲ್ಲಿ ಕಂಡ ಅತ್ಯಂತ ಭೀಕರ ಹವಾಮಾನ ಘಟನೆಗಳಲ್ಲಿ ಇದೂ ಒಂದು ಎಂದು ಹೇಳಿದ್ದಾರೆ. ಪರಿಸ್ಥಿತಿ ಅತ್ಯಂತ ವೇಗವಾಗಿ ಹದಗೆಟ್ಟಿದ್ದು, ತುರ್ತು ಸೇವಾ ಸಿಬ್ಬಂದಿ ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದರು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಕ್ರಿಸ್ ಕ್ರೇಲ್ ತಿಳಿಸಿದ್ದಾರೆ.ರಾಷ್ಟ್ರೀಯ ಹವಾಮಾನ ಸೇವೆ ಇಲಿನಾಯ್ಸ್ನಲ್ಲಿ ಎರಡು ಸುಂಟರಗಾಳಿಗಳನ್ನು ದೃಢಪಡಿಸಿದೆ. ಒಂದು ದಕ್ಷಿಣ ಕುಕ್ ಕೌಂಟಿ ಹಾಗೂ ಮತ್ತೊಂದು ಪೂರ್ವ ವಿಲ್ ಕೌಂಟಿಯಲ್ಲಿ ದಾಖಲಾಗಿದ್ದು, ಎರಡೂ EF-1 ಮಟ್ಟದ ಸುಂಟರಗಾಳಿಗೆ ಸಮಾನವಾದ ಹಾನಿ ಉಂಟುಮಾಡಿವೆ ಎಂದು NWS ತಿಳಿಸಿದೆ. ಇಂಡಿಯಾನಾದ ಗ್ಯಾರಿಯಲ್ಲಿ ಗಂಟೆಗೆ 159 ಕಿ.ಮೀ. ವೇಗದಲ್ಲಿ ಗಾಳಿ ಬೀಸಿದೆ ಎಂದು ವರದಿಯಾಗಿದ್ದು, ಹಲವು ಪ್ರದೇಶಗಳಲ್ಲಿ ಗಂಟೆಗೆ 128 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದ ಗಾಳಿ ದಾಖಲಾಗಿದೆ.NWS ಸ್ಟಾರ್ಮ್ ಪ್ರಿಡಿಕ್ಷನ್ ಸೆಂಟರ್ನ ಪ್ರಾಥಮಿಕ ಮಾಹಿತಿಯ ಪ್ರಕಾರ, ಅಯೋವಾದ ಮೂಲಕ ಚಲಿಸಿ ಬಳಿಕ ಇಂಡಿಯಾನಾ ತಲುಪಿದ ಪ್ರಬಲ ಹವಾಮಾನ ವ್ಯವಸ್ಥೆ ‘ಡೆರೆಚೊ’ ಎಂದು ವರ್ಗೀಕರಿಸಲಾಗಿದೆ. ಡೆರೆಚೊ ಎಂದರೆ ದೀರ್ಘಕಾಲದವರೆಗೆ ಮುಂದುವರಿಯುವ, ವಿಶಾಲ ಪ್ರದೇಶದಲ್ಲಿ ನೇರ ರೇಖೆಯ ಗಾಳಿಯೊಂದಿಗೆ ಭಾರೀ ಮಳೆ ಹಾಗೂ ಗುಡುಗು ಸಹಿತ ಬಿರುಗಾಳಿ ಉಂಟುಮಾಡುವ ಹವಾಮಾನ ವ್ಯವಸ್ಥೆ. ಇದರ ಪರಿಣಾಮ ಕೆಲವೊಮ್ಮೆ ಸುಂಟರಗಾಳಿ ಅಥವಾ ಚಂಡಮಾರುತದಷ್ಟೇ ವ್ಯಾಪಕ ಹಾನಿ ಉಂಟಾಗಬಹುದು.ಚಿಕಾಗೋ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಬಿರುಗಾಳಿಯ ವಿನಾಶದ ತೀವ್ರತೆ ಕಂಡುಬಂದಿದೆ. ಟಿನ್ಲೆ ಪಾರ್ಕ್ನ ನಿವಾಸಿ ಕೆರ್ರಿ ಹೌರಿಗನ್, ತಮ್ಮ 25 ವರ್ಷಗಳ ಹಳೆಯ ಮನೆಯ ಹೊರಗೆ ನಿಂತು “ಸಂಪೂರ್ಣ ವಿನಾಶ. ಛಾವಣಿಯೇ ಇಲ್ಲ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.ಬಿರುಗಾಳಿಯ ಅಬ್ಬರಕ್ಕೆ ಹಲವು ಮನೆಗಳು ಹಾಗೂ ಕಟ್ಟಡಗಳು ಹಾನಿಗೊಳಗಾಗಿದ್ದು, ವಾಹನಗಳು ಮತ್ತು ಇತರ ವಸ್ತುಗಳು ಕೂಡ ಹಾನಿಗೀಡಾಗಿವೆ. ಭೀಕರ ಹವಾಮಾನದಿಂದ ವಿಮಾನ ಸಂಚಾರಕ್ಕೂ ಭಾರಿ ಅಡ್ಡಿಯಾಗಿದೆ. ಚಿಕಾಗೋದ ಓ’ಹೇರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂರಾರು ವಿಮಾನಗಳ ಹಾರಾಟ ರದ್ದುಗೊಂಡಿದ್ದು, 1,000ಕ್ಕೂ ಹೆಚ್ಚು ವಿಮಾನಗಳು ವಿಳಂಬಗೊಂಡಿವೆ ಎಂದು ವರದಿಯಾಗಿದೆ.ನ್ಯೂಯಾರ್ಕ್ನ ಜಾನ್ ಎಫ್. ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ 140ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದೆ. ಮಧ್ಯಪಶ್ಚಿಮ ಅಮೆರಿಕದಲ್ಲಿ ಅತಿಯಾದ ತೇವಾಂಶ, ವಾತಾವರಣದ ಅಸ್ಥಿರತೆ ಹಾಗೂ ತೀವ್ರ ಬಿರುಗಾಳಿಗಳಿಗೆ ಅನುಕೂಲಕರ ಪರಿಸ್ಥಿತಿಗಳು ನಿರ್ಮಾಣವಾಗಿದ್ದವು ಎಂದು ಹವಾಮಾನ ತಜ್ಞರು ಹೇಳಿದ್ದಾರೆ.