Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕರ್ನಾಟಕ ಕರಾವಳಿಯಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಉತ್ತೇಜನ: ಮಂಗಳೂರಿನಿಂದ ಸೇವೆ ಆರಂಭಿಸಲು ಮಹತ್ವದ ಹೆಜ್ಜೆ!

Spread the love

ಬೆಂಗಳೂರು: ಕರ್ನಾಟಕದಲ್ಲಿ ಕ್ರೂಸ್ ಪ್ರವಾಸೋದ್ಯಮವನ್ನು ಉತ್ತೇಜಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದ್ದು, ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್ ಅವರ ನಿರ್ದೇಶನದಂತೆ ದೇಶದ ಪ್ರಮುಖ ಕ್ರೂಸ್ ಸೇವಾ ಸಂಸ್ಥೆಗಳೊಂದಿಗೆ ಸಮಾಲೋಚನೆ ಆರಂಭಿಸಿದೆ. ಇದರ ಭಾಗವಾಗಿ, ಭಾರತದ ಪ್ರಮುಖ ಕ್ರೂಸ್ ಕಂಪನಿಗಳಲ್ಲೊಂದಾದ ವಾಟರ್‌ವೇಸ್ ಲೀಷರ್ ಟೂರಿಸಂ ಲಿಮಿಟೆಡ್ ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸಲು ತಾತ್ವಿಕ ಅನುಮೋದನೆ ನೀಡಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್, ಐಎಎಸ್ ತಿಳಿಸಿದ್ದಾರೆ.

ಇತ್ತೀಚೆಗೆ ಕಾರ್ಯದರ್ಶಿಗಳ ನೇತೃತ್ವದ ಹಿರಿಯ ಅಧಿಕಾರಿಗಳ ನಿಯೋಗವು ಮುಂಬೈನಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜುರ್ಗೆನ್ ಬೈಲೊಮ್ ಮತ್ತು ಸಹ ನಿರ್ದೇಶಕ ಭರತ್ ಆಚಾರ್ಯ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿತು. ಈ ಸಭೆಯಲ್ಲಿ ಮಂಗಳೂರಿನಲ್ಲಿ ಕ್ರೂಸ್ ಸೇವೆ ಆರಂಭಿಸಲು ಅಗತ್ಯವಿರುವ ಮೂಲಸೌಕರ್ಯ, ಕಾರ್ಯಾಚರಣೆಯ ಅಗತ್ಯತೆಗಳು, ಮಾರುಕಟ್ಟೆ ಅವಕಾಶಗಳು ಹಾಗೂ ಕರಾವಳಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಿತು.ಈ ವೇಳೆ ಸಂಸ್ಥೆಯ ಪ್ರತಿನಿಧಿಗಳು ಮಂಗಳೂರು ಕರಾವಳಿ ಪ್ರದೇಶದ ಪ್ರವಾಸೋದ್ಯಮ ಮಾರುಕಟ್ಟೆ, ಪ್ರವಾಸಿಗರ ಬೇಡಿಕೆ ಹಾಗೂ ವಾಣಿಜ್ಯ ಸಾಮರ್ಥ್ಯದ ಬಗ್ಗೆ ಸಮಗ್ರ ಅಧ್ಯಯನ ನಡೆಸುವ ಅಗತ್ಯವಿದೆ. ಜೊತೆಗೆ, ಮಂಗಳೂರು ಕರಾವಳಿಯನ್ನು ದೇಶೀಯ ಹಾಗೂ ಅಂತರರಾಷ್ಟ್ರೀಯ ಕ್ರೂಸ್ ಪ್ರವಾಸೋದ್ಯಮ ತಾಣವಾಗಿ ಗುರುತಿಸುವ ಉದ್ದೇಶದಿಂದ ವಿಶೇಷ ಪ್ರಚಾರ ಕಾರ್ಯತಂತ್ರ ರೂಪಿಸುವಂತೆ ಸಲಹೆ ನೀಡಿದರು.ಇದರಂತೆ, ಮುಂದಿನ ತಿಂಗಳು ಸಂಸ್ಥೆಯ ತಾಂತ್ರಿಕ ತಂಡ ಮಂಗಳೂರಿಗೆ ಭೇಟಿ ನೀಡಿ ಬಂದರು ಮೂಲಸೌಕರ್ಯ, ಪ್ರವಾಸೋದ್ಯಮದ ಸಾಧ್ಯತೆ, ಕಾರ್ಯಾಚರಣೆಯ ಅನುಕೂಲತೆ ಹಾಗೂ ಕ್ರೂಸ್ ಸೇವೆ ಆರಂಭಿಸಲು ಅಗತ್ಯವಿರುವ ಸೌಲಭ್ಯಗಳ ಕುರಿತು ಸ್ಥಳ ಪರಿಶೀಲನೆ ನಡೆಸಲಿದೆ. ಇದೇ ವೇಳೆ, ರಾಜ್ಯದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಅಗತ್ಯವಾದ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆಯ ಹಿರಿಯ ಅಧಿಕಾರಿಗಳ ತಂಡವು ಇತ್ತೀಚೆಗೆ ಮುಂಬೈ ಅಂತರರಾಷ್ಟ್ರೀಯ ಕ್ರೂಸ್ ಟರ್ಮಿನಲ್‌ಗೆ ಭೇಟಿ ನೀಡಿ ಅಲ್ಲಿನ ಪ್ರಯಾಣಿಕರ ಸೌಲಭ್ಯಗಳು, ಟರ್ಮಿನಲ್ ನಿರ್ವಹಣೆ ಹಾಗೂ ಕಾರ್ಯಾಚರಣಾ ವ್ಯವಸ್ಥೆಗಳನ್ನು ಅಧ್ಯಯನ ಮಾಡಿದೆ.ಈ ಅಧ್ಯಯನದ ಆಧಾರದ ಮೇಲೆ, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೂಸ್ ಟರ್ಮಿನಲ್ ನಿರ್ಮಾಣದ ಸಾಧ್ಯತಾ ಅಧ್ಯಯನವನ್ನು ಕೈಗೊಳ್ಳುವಂತೆ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ಕುರಿತು ಮಾತನಾಡಿದ ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್, “ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಕ್ರೂಸ್ ಪ್ರವಾಸೋದ್ಯಮಕ್ಕೆ ಅಪಾರ ಅವಕಾಶಗಳಿವೆ. ಪ್ರಮುಖ ಉದ್ಯಮ ಸಂಸ್ಥೆಗಳೊಂದಿಗೆ ಕೈಜೋಡಿಸಿ ಅಗತ್ಯ ಮೂಲಸೌಕರ್ಯ ಹಾಗೂ ಅನುಕೂಲಕರ ಪರಿಸರ ನಿರ್ಮಿಸುವ ಮೂಲಕ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸರ್ಕಾರ ಬದ್ಧವಾಗಿದೆ. ಈ ಯೋಜನೆಯಿಂದ ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಉತ್ತೇಜನ ದೊರೆಯಲಿದ್ದು, ಉದ್ಯೋಗ ಸೃಷ್ಟಿ ಹಾಗೂ ಹೂಡಿಕೆ ಅವಕಾಶಗಳು ಹೆಚ್ಚಲಿವೆ” ಎಂದು ಹೇಳಿದರು.ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ್ ಮಾತನಾಡಿ, “ಮಂಗಳೂರಿನಿಂದ ಕ್ರೂಸ್ ಸೇವೆ ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸಲು ವಾಟರ್‌ವೇಸ್ ಲೀಷರ್ ಟೂರಿಸಂ ಲಿಮಿಟೆಡ್ ನೀಡಿರುವ ತಾತ್ವಿಕ ಒಪ್ಪಿಗೆ ಮಹತ್ವದ ಮೈಲಿಗಲ್ಲಾಗಿದೆ. ಮುಂದಿನ ಹಂತದಲ್ಲಿ ಸಂಸ್ಥೆಯ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಲಿದ್ದು, ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಇದೇ ವೇಳೆ, ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕ್ರೂಸ್ ಟರ್ಮಿನಲ್ ಸ್ಥಾಪಿಸುವ ಸಾಧ್ಯತೆಯನ್ನೂ ಇಲಾಖೆ ಪರಿಶೀಲಿಸುತ್ತಿದೆ” ಎಂದು ತಿಳಿಸಿದರು.


Spread the love
Share:

administrator

Leave a Reply

Your email address will not be published. Required fields are marked *