Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಮ್ಮು-ಕಾಶ್ಮೀರದಲ್ಲಿ ಪ್ರಕೃತಿ ವಿಕೋಪ: ಭಾರಿ ಮಳೆ, ಪ್ರವಾಹಕ್ಕೆ 14 ಮಂದಿ ಬಲಿ!

Spread the love

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಹಾಗೂ ರಾಜೇರಿ ಜಿಲ್ಲೆಗಳ ಪೀರ್ ಪಂಜಾಲ್ ಪ್ರದೇಶದಲ್ಲಿ ರವಿವಾರ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದ್ದು, ಕನಿಷ್ಠ 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಬೆಟ್ಟಗಳ ಇಳಿಜಾರಿನಿಂದ ಕೊಚ್ಚಿಕೊಂಡು ಬಂದ ನೀರು, ಕಲ್ಲು ಮತ್ತು ಮಣ್ಣಿನ ಪ್ರವಾಹಕ್ಕೆ ಮನೆಗಳು ಹಾನಿಗೊಳಗಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಶೋಧ ಕಾರ್ಯ ಮುಂದುವರಿದಂತೆ ಮೃತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಗಡಿ ಜಿಲ್ಲೆಗಳಲ್ಲಿ ಭಾರಿ ಮಳೆಯಿಂದಾಗಿ ವ್ಯಾಪಕ ನಾಶನಷ್ಟ ಸಂಭವಿಸಿದ್ದು, ಪೂಂಚ್ ನ ಸುರಸ್ಕೋಟ್, ಹವೇಲಿ ಮತ್ತು ಮಂಡಿ ಪ್ರದೇಶಗಳಲ್ಲಿ ಪೊಲೀಸ್‌, ಸೇನೆ, ಎಸ್‌ಡಿಆರ್‌ಎಫ್, ಆಡಳಿತ ಸಿಬ್ಬಂದಿ ಮತ್ತು ಸ್ಥಳೀಯ ಸ್ವಯಂಸೇವಕರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ತಮ್ಮದೆಹಲಿ ಪ್ರವಾಸವನ್ನು ಮೊಟಕುಗೊಳಿಸಿ, ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲು ಜಮ್ಮುವಿಗೆ ಆಗಮಿಸಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ರಕ್ಷಣಾ ಪ್ರಯತ್ನಗಳನ್ನು ಪರಾಮರ್ಶಿಸಿ, ಸಂತ್ರಸ್ತ ಕುಟುಂಬಗಳಿಗೆ ತಕ್ಷಣದ ಪರಿಹಾರ ಒದಗಿಸುವಂತೆ ನಿರ್ದೇಶಿಸಿದ್ದಾರೆ.

ಭಾರಿ ಮಳೆಯಿಂದಾಗಿ ಆಯಕಟ್ಟಿನ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ-44ರಲ್ಲಿ ಸಂಚಾರ ವ್ಯತ್ಯಯಗೊಂಡಿದ್ದು, ಅಪಾಯಕಾರಿ ರಸ್ತೆಗಳಲ್ಲಿ ಸಂಚರಿಸದಂತೆ ಪ್ರಯಾಣಿಕರಿಗೆ ಸೂಚನೆ ನೀಡಲಾಗಿದೆ.
ಮುಂಬರುವ ಮೂರು ದಿನಗಳ ಕಾಲ ಹವಾಮಾನ ವೈಪರೀತ್ಯ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಜುಲೈ 3 ರಂದು ಪ್ರಾರಂಭವಾದ ವಾರ್ಷಿಕ ಅಮರನಾಥ ಯಾತ್ರೆ ಹಾಗೂ ಕತ್ರಾದ ವೈಷ್ಟೋ ದೇವಿ ಮತ್ತು ರಿಯಾಸಿಯ ಶಿವಖೋರಿ ಯಾತ್ರೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸುರನ್ನೋಟ್ ನ ಲೋವರ್ ಮುರ್ರಾದಲ್ಲಿ ಅತಿ ಹೆಚ್ಚು ನಷ್ಟ ಸಂಭವಿಸಿದೆ. ಒಂದೇ ಕುಟುಂಬದ ಎಂಟು ಮಂದಿ ಕೊಚ್ಚಿಹೋಗಿದ್ದು, ಸಂಜೆಯ ವೇಳೆಗೆ ಎರಡು ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಉಳಿದ ಆರು ಮೃತದೇಹಗಳಿಗಾಗಿ ಶೋಧ ತಂಡಗಳು ಕಾರ್ಯಾಚರಣೆ ಮುಂದುವರಿಸಿವೆ.

ಮೃತರನ್ನು ನೂರ್ ಸಾಫಿಯಾ (59), ಆಕೆಯ ಮಕ್ಕಳಾದ ಸಜ್ಜಾದ್ ಅಹಮದ್ (16), ಹಕ್ ನವಾಜ್ ಅಹಮದ್ (10), ಶಹನವಾಜ್ ಅಹಮದ್ (10), ಖಾಲ್ದಾ ಕೌಸರ್ (25) ಮತ್ತು ಆಕೆಯ 2 ವರ್ಷದ ಮಗ ಸೋಫಿಯಾನ್, ಬಾನೋ ಬಿ (60) ಮತ್ತು ಮೊಹಮ್ಮದ್ ಅಕ್ರಮ್ (7) ಎಂದು ಗುರುತಿಸಲಾಗಿದೆ.
ಸಾಂಗ್ಲಾ ಗ್ರಾಮದಲ್ಲಿ ನಾಲ್ವರು ಮತ್ತು ಹತ್ತಿರದ ಸಾಂಗಲಾನಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ನೂನಾ ಬಂದಿಯಲ್ಲಿ ನಾಜಿಯಾ ಕೌಸರ್ (28) ಮೃತಪಟ್ಟಿದ್ದು, ಗಾಯಗೊಂಡ ನಾಲ್ವರನ್ನು ಪೂಂಚ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಮ್ಮುವಿನ ತಾವಿ ನದಿಯಲ್ಲಿ ನೀರು ದಿಢೀರ್ ಹೆಚ್ಚಾಗಿ ಅಪಾರ ಹಾನಿ ಸಂಭವಿಸಿದೆ. ಪೀರ್ ಖೋ ದೇವಾಲಯದ ಬಳಿ ರಕ್ಷಣಾ ತಂಡಗಳು ಮೂವರು ಬಾಲಕರನ್ನು ರಕ್ಷಿಸಿವೆ. ರಾಜೇರಿಯ ಧಂಗ್ರಿ ನದಿ ದಂಡೆಯಲ್ಲಿ ಸಿಲುಕಿದ್ದ ಇಬ್ಬರು ಬಾಲಕರನ್ನು ಮತ್ತು ಠಾಣಾಮಂಡಿಯಲ್ಲಿ ಸಿಲುಕಿದ್ದ ಒಂಬತ್ತು ಜನರನ್ನು ಸೇನೆ, ಪೊಲೀಸ್ ಮತ್ತು ಎಸ್‌ಡಿಆರ್‌ಎಫ್ ಪಡೆಗಳು ರಕ್ಷಿಸಿವೆ. ಪ್ರವಾಹದ ಸವಾಲಿನ ಪರಿಸ್ಥಿತಿ ಮತ್ತು ರಭಸದ ನೀರನ್ನು ಲೆಕ್ಕಿಸದೆ ತಮ್ಮ ಪಡೆಗಳು ಐದು ಮಕ್ಕಳು ಸೇರಿದಂತೆ 11 ನಾಗರಿಕರನ್ನು ರಕ್ಷಿಸಿವೆ ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ತಿಳಿಸಿದೆ.

ಚೆನಾಬ್ ಮತ್ತು ಇತರ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾದ ನಂತರ ಇಡೀ ಜಮ್ಮು ವಿಭಾಗದಾದ್ಯಂತ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ರಿಯಾಸಿಯಲ್ಲಿರುವ ಸಲಾಲ್ ಜಲವಿದ್ಯುತ್ ಯೋಜನೆಯ ಗೇಟ್ ಗಳು ಎರಡನೇ ದಿನವೂ ತೆರೆದಿದ್ದು, ಚೆನಾಬ್ ಗೆ ನೀರಿನ ಹರಿವು ತೀವ್ರವಾಗಿ ಹೆಚ್ಚಾಗಿದೆ. ಬಾಗ್ಲಿಹಾರ್ ಜಲವಿದ್ಯುತ್ ಯೋಜನೆಯ ಗೇಟ್ ಗಳನ್ನೂ ತೆರೆದ ನಂತರ ನದಿಯ ಮಟ್ಟ ಹೆಚ್ಚಾಗಿದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರವಾಹದ ಬಗ್ಗೆ ಪ್ರತಿಕ್ರಿಯಿಸಿದ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ರಕ್ಷಣಾ ಕಾರ್ಯಾಚರಣೆಯನ್ನು ಪರಿಶೀಲಿಸಿದ್ದೇನೆ. ಸಂತ್ರಸ್ತ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಎಲ್ಲಾ ಇಲಾಖೆಗಳು ಹೈ ಅಲರ್ಟ್ ನಲ್ಲಿವೆ. ಸಾರ್ವಜನಿಕರು ಶಾಂತಿಯಿಂದಿರಬೇಕು ಮತ್ತು ಅಧಿಕೃತ ಸೂಚನೆಗಳನ್ನು ಅನುಸರಿಸಬೇಕು. ರಾಜೇರಿ ಮತ್ತು ಪೂಂಚ್ ನಲ್ಲಿ ಸಂಭವಿಸಿದ ಜೀವಹಾನಿಯಿಂದ ನನಗೆ ತೀವ್ರ ದುಃಖವಾಗಿದೆ ಎಂದು ಹೇಳಿದರು.
ಸಿಎಂ ಉಮ‌ರ್ ಅಬ್ದುಲ್ಲಾ ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದು, ಸ್ಥಳೀಯ ಶಾಸಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಪರಿಸ್ಥಿತಿಯನ್ನು ಖುದ್ದಾಗಿ ಮೇಲ್ವಿಚಾರಣೆ ಮಾಡಲು ಜಮ್ಮುವಿಗೆ ತೆರಳುವುದಾಗಿ ಪ್ರಕಟಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್ ದುರಂತಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *