₹6 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ರೈಲು ನಿಲ್ದಾಣಕ್ಕೆ ಗತಿಯಿಲ್ಲ; ‘ಭೂತದ ನಿಲ್ದಾಣ’ವೆಂದು ಕರೆಸಿಕೊಳ್ಳುತ್ತಿರುವ ರೈಲ್ವೆ ನಿಲ್ದಾಣ!

ಭೋಪಾಲ್: ಸುಮಾರು 6 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಮಧ್ಯಪ್ರದೇಶದ ಭೋಪಾಲ್ ಸಮೀಪದ ನಿಶಾತ್‌ಪುರ ರೈಲು ನಿಲ್ದಾಣವು ಎರಡು ವರ್ಷಗಳಿಂದ ಕಾರ್ಯಾರಂಭ ಮಾಡದೆ ನಿರ್ಜನವಾಗಿ ಬಿದ್ದಿದ್ದು, ರೈಲುಗಳ ನಿಲುಗಡೆ ಇಲ್ಲದೆ, ಸಿಬ್ಬಂದಿ ನೇಮಕವಾಗದೆ ಹಾಗೂ ಪ್ರಯಾಣಿಕರ ಓಡಾಟವೂ ಇಲ್ಲದ ಕಾರಣ ಸ್ಥಳೀಯರಲ್ಲಿ ‘ಭೂತದ ನಿಲ್ದಾಣ’ ಎಂಬ ಹೆಸರಿನಿಂದಲೇ ಗುರುತಿಸಿಕೊಳ್ಳುತ್ತಿದೆ ಎಂದು Times of India ವರದಿ ಮಾಡಿದೆ.
ಜೂನ್ 2023ರಲ್ಲೇ ನಿಲ್ದಾಣದ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿತ್ತು. ಪ್ಲಾಟ್‌ಫಾರ್ಮ್, ಆಸನ ವ್ಯವಸ್ಥೆ ವಿದ್ಯುತ್ ದೀಪಗಳು ಸೇರಿದಂತೆ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಇಲ್ಲಿವರೆಗೆ ಯಾವುದೇ ರೈಲಿಗೆ ನಿಲುಗಡೆ ನೀಡಲಾಗಿಲ್ಲ. ಸಿಬ್ಬಂದಿಯನ್ನೂ ನಿಯೋಜಿಸಿಲ್ಲ. ಪರಿಣಾಮ, ನಿಲ್ದಾಣ ಸಂಪೂರ್ಣ ನಿರ್ಜನವಾಗಿದೆ.

“ನಿಲ್ದಾಣವನ್ನು ಅತ್ಯಂತ ಸುಂದರವಾಗಿ ನಿರ್ಮಿಸಿದ್ದಾರೆ. ಆದರೆ ರಾತ್ರಿ ವೇಳೆಯಲ್ಲಿ ಅಲ್ಲಿಗೆ ಹೋಗಲು ಭಯವಾಗುತ್ತದೆ” ಎಂದು ಸ್ಥಳೀಯ ನಿವಾಸಿ ಪ್ರೇಮ್ ಪ್ರಕಾಶ್ ಹೇಳಿದ್ದಾರೆ.
ರೈಲುಗಳಿಲ್ಲ, ಸಿಬ್ಬಂದಿಯಿಲ್ಲ, ಪ್ರಯಾಣಿಕರಿಲ್ಲದ ಕಾರಣ ರಾತ್ರಿ ವೇಳೆ ನಿಲ್ದಾಣವು ಭಯಾನಕ ವಾತಾವರಣ ಸೃಷ್ಟಿಸುತ್ತದೆ. ಈ ಕಾರಣದಿಂದಲೇ ನಿಶಾತ್‌ಪುರ ನಿಲ್ದಾಣವು ‘ಭೂತದ ನಿಲ್ದಾಣ’ ಎಂಬ ಅಪಖ್ಯಾತಿಯನ್ನೂ ಪಡೆದುಕೊಂಡಿದೆ. ರಾತ್ರಿ ವೇಳೆಯಲ್ಲಿ ‘ಅಲೌಕಿಕ’ ಅನುಭವಗಳಿಗಾಗಿ ಕುತೂಹಲದಿಂದ ಬರುವವರ ಸಂಖ್ಯೆಯೂ ಹೆಚ್ಚಿದೆ ಎಂದು ಸ್ಥಳೀಯರು ಹೇಳುತ್ತಾರೆ.
“ರೈಲುಗಳೂ ಇಲ್ಲ, ಸಿಬ್ಬಂದಿಯೂ ಇಲ್ಲ, ಪ್ರಯಾಣಿಕರೂ ಇಲ್ಲದ ಕಾರಣ ರಾತ್ರಿ ವೇಳೆ ಈ ಸ್ಥಳ ಭೂತದ ಮನೆಯಂತೆ ಕಾಣಿಸುತ್ತದೆ” ಎಂದು ಭೋಪಾಲ್ ರೈಲ್ವೆ ವಿಭಾಗದ ಸಿಬ್ಬಂದಿಯೊಬ್ಬರು ಹೆಸರು ಬಹಿರಂಗಪಡಿಸದ ಷರತ್ತಿನಡಿ ತಿಳಿಸಿದ್ದಾರೆ.
ಪ್ರತಿ ರಾತ್ರಿ ರೈಲುಗಳು ನಿಶಾತ್ ಪುರ ನಿಲ್ದಾಣವನ್ನು ನಿಲ್ಲದೆ ಹಾದು ಹೋಗುತ್ತಿವೆ. ಆದರೆ ಪೂರ್ಣಗೊಂಡಿರುವ ನಿಲ್ದಾಣ ಇನ್ನೂ ಏಕೆ ಕಾರ್ಯಾರಂಭ ಮಾಡಿಲ್ಲ ಎಂಬುದಕ್ಕೆ ಸ್ಪಷ್ಟ ಉತ್ತರ ಅಧಿಕಾರಿಗಳ ಬಳಿಯೂ ಇಲ್ಲ.
“ಈ ಬಗ್ಗೆ ನಮಗೂ ಯಾವುದೇ ಮಾಹಿತಿ ಇಲ್ಲ” ಎಂದು ಹೆಸರು ಬಹಿರಂಗಪಡಿಸಲು ನಿರಾಕರಿಸಿದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಲ್ದಾಣ ಆರಂಭಕ್ಕೂ ಮುನ್ನ ನಡೆಯಬೇಕಾದ ತಾಂತ್ರಿಕ ತಪಾಸಣೆ, ವಿವಿಧ ಅನುಮೋದನೆಗಳು, ಸುರಕ್ಷತಾ ಅನುಮತಿ, ಸಿಬ್ಬಂದಿ ನೇಮಕ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ಪ್ರಕ್ರಿಯೆಗಳು ಯಾವ ಹಂತದಲ್ಲಿ ಸ್ಥಗಿತಗೊಂಡಿವೆ ಎಂಬುದೂ ಸ್ಪಷ್ಟವಾಗಿಲ್ಲ.
ನಿಲ್ದಾಣ ಕಾರ್ಯಾರಂಭವಾದರೆ ಸ್ಥಳೀಯರಿಗೆ ಉತ್ತಮ ರೈಲು ಸಂಪರ್ಕ ದೊರೆಯುವ ಜತೆಗೆ ಸುತ್ತಮುತ್ತಲಿನ ವ್ಯಾಪಾರ ಚಟುವಟಿಕೆಗಳಿಗೂ ಉತ್ತೇಜನ ಸಿಗಲಿದೆ. ಆದರೆ ಸದ್ಯಕ್ಕೆ 6 ಕೋಟಿ ರೂ. ವೆಚ್ಚದ ಸಾರ್ವಜನಿಕ ಆಸ್ತಿ ಬಳಕೆಯಾಗದೆ ಉಳಿದಿದೆ.
ನಿಲ್ದಾಣ ಆರಂಭವಾಗುವ ಬಗ್ಗೆ ಕೇಳಿದಾಗ ಭೋಪಾಲ್ ರೈಲ್ವೆ ವಿಭಾಗದ ಸಾರ್ವಜನಿಕ ಸಂಪರ್ಕಾಧಿಕಾರಿ ನವಲ್ ಅಗರ್ವಾಲ್, “ನಿಲ್ದಾಣ ಆರಂಭಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದೇವೆ. ಶೀಘ್ರದಲ್ಲೇ ಸಾರ್ವಜನಿಕ ಬಳಕೆಗೆ ತೆರೆಯಲಾಗುವುದು” ಎಂದು ತಿಳಿಸಿದ್ದಾರೆ.