ಶಂಕರಾಚಾರ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಉಡುಪಿ ಕೃಷ್ಣ ಮಠದಲ್ಲಿ ವಿವಾದ; ಕ್ಷಮೆಯಾಚಿಸಿದ ಕಲಾವಿದೆಯರು!

ಉಡುಪಿ: ಉಡುಪಿಯ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಹರಿಕಥಾ ಕಾರ್ಯಕ್ರಮದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ಕಲಾವಿದೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಧಾರ್ಮಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ವಿಡಿಯೋ ಬಿಡುಗಡೆ ಮಾಡುವ ಮೂಲಕ ಕಲಾವಿದೆಯರು ತಮ್ಮ ತಪ್ಪಿಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಈ ಸೂಕ್ಷ್ಮ ಘಟನೆಯ ಕುರಿತು ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಉದಯಕುಮಾರ್ ಸರಳತ್ತಾಯ ಅವರು ಅಧಿಕೃತ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಮಠದ ಕಡೆಯಿಂದಲೂ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಜುಲೈ 11ರಂದು ಕೃಷ್ಣ ಮಠದ ರಾಜಾಂಗಣದಲ್ಲಿ ಅಂಕಿತಾ ನಾಯ್ಕ್ ಮತ್ತು ಗೌರಿ ಪಾಂಡುರಂಗಿ ಎಂಬುವವರು ನಮ್ಮಿಂದ ಒಂದು ಗಂಟೆಯ ಭರತನಾಟ್ಯ ಕಾರ್ಯಕ್ರಮ ಮತ್ತು ಮತ್ತೊಂದು ಗಂಟೆಯ ಹರಿವಾಣ ನೃತ್ಯ ಸೇವೆ ನಡೆಸಿಕೊಡುವುದಾಗಿ ಅನುಮತಿ ಪಡೆದಿದ್ದರು. ಆದರೆ, ಕಾರ್ಯಕ್ರಮದ ನಡುವೆ ಆಯೋಜಕರಿಗೆ ತಿಳಿಸದೆ ಏಕಾಏಕಿ ‘ಭಕ್ತ ಪ್ರಹ್ಲಾದ’ ಎಂಬ ಹರಿಕಥಾ ಪ್ರಸಂಗವನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದೆಯು ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಮಾತುಗಳನ್ನಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಅನಪೇಕ್ಷಿತ ಘಟನೆಯ ಬಗ್ಗೆ ಮಠಕ್ಕೆ ತೀವ್ರ ವಿಷಾದವಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕಲಾವಿದೆಯರಿಗೆ ಸಾರ್ವಜನಿಕವಾಗಿ ಕ್ಷಮೆ ಕೇಳಲು ಸೂಚಿಸಲಾಗಿತ್ತು. ಅದರಂತೆ ಅವರು ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾರೆ” ಎಂದು ದಿವಾನರು ಸ್ಪಷ್ಟಪಡಿಸಿದ್ದಾರೆ.
ಶಂಕರಾಚಾರ್ಯರ ಕುರಿತಾದ ಈ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಶಂಕರಾಚಾರ್ಯರ ಪೀಠಗಳ ಅನುಯಾಯಿಗಳು, ಮಠಾಧೀಶರು ಹಾಗೂ ಸನಾತನ ಧರ್ಮದ ಪ್ರಮುಖರು ತೀವ್ರ ಆಕ್ರೋಶ ಹೊರಹಾಕಿದ್ದರು. ಉಡುಪಿ ಮಠದ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದು ಭಕ್ತರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಈಗ ಈ ಕ್ಷಮೆಯಾಚನೆ ನಡೆದಿದೆ.