ಪೋಕ್ಸೋ ಪ್ರಕರಣದ ದ್ವೇಷಕ್ಕೆ ಒಂದೇ ದಿನ 6 ಜನರ ಭೀಕರ ಹತ್ಯೆ; ನರಹಂತಕ ಪತಿ ಅಂದರ್!

ತೆಲಂಗಾಣ: ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಪ್ರಕರಣದ ದ್ವೇಷಕ್ಕೆ, ತನ್ನ ಪತ್ನಿ, ಇಬ್ಬರು ಹಸುಗೂಸುಗಳು ಹಾಗೂ ತನ್ನ ವಿರುದ್ಧ ದೂರು ನೀಡಿದ್ದ ಅಪ್ರಾಪ್ತ ಸಂತ್ರಸ್ತೆ, ಆಕೆಯ ತಾಯಿ, ಅಜ್ಜಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಅತ್ಯಂತ ಘೋರ ಘಟನೆ ಶನಿವಾರ ಮುಂಜಾನೆ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ತಾಲೂಕಿನ ದೈವಲಗುಡ ಗ್ರಾಮದಲ್ಲಿ ಜರುಗಿದೆ. ದೈವಲಗುಡ ನಿವಾಸಿ ರಾಜ್‌ಕುಮಾರ್ (28) ಎಂಬಾತನೇ ಆರು ಅಮಾಯಕರನ್ನು ರಕ್ತದ ಮಡುವಿನಲ್ಲಿ ತೇಲಿಸಿದ ನರಹಂತಕ ಆರೋಪಿಯಾಗಿದ್ದಾನೆ. ಈತನ ಕ್ರೌರ್ಯಕ್ಕೆ ಸ್ವಂತ ಪತ್ನಿ ಸರಿತಾ, ಇಬ್ಬರು ಮಕ್ಕಳು ಹಾಗೂ ಪೋಕ್ಸೋ ಪ್ರಕರಣದ ಸಂತ್ರಸ್ತ ಬಾಲಕಿ, ಆಕೆಯ ತಾಯಿ ಮತ್ತು ಅಜ್ಜಿ ಬಲಿಯಾಗಿದ್ದಾರೆ.

ಪೊಲೀಸ್ ತನಿಖೆಯ ವಿವರಗಳ ಪ್ರಕಾರ, ಆರೋಪಿ ರಾಜ್‌ಕುಮಾರ್ ಏಳು ವರ್ಷಗಳ ಹಿಂದೆ ಸರಿತಾಳನ್ನು ಪ್ರೀತಿಸಿ ಮದುವೆಯಾಗಿದ್ದನು. ಇವರಿಗೆ ಇಬ್ಬರು ಮಕ್ಕಳಿದ್ದರು. ಇತ್ತೀಚೆಗೆ ಈತ ನೆರೆಹೊರೆಯ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಸಂಬಂಧ ಮೇ 16ರಂದು ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಶಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನನ್ವಯ ಪೊಲೀಸರು ರಾಜ್‌ಕುಮಾರ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ಜೈಲಿಗಟ್ಟಿದ್ದರು.
ಜೈಲು ಪಾಲಾಗಿದ್ದ ಆರೋಪಿ ರಾಜ್‌ಕುಮಾರ್ ಇತ್ತೀಚೆಗಷ್ಟೇ ನ್ಯಾಯಾಲಯದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿದ್ದನು. ತನ್ನ ವಿರುದ್ಧ ದೂರು ನೀಡಿ ಜೈಲಿಗೆ ಕಳುಹಿಸಿದ ಸಂತ್ರಸ್ತೆಯ ಕುಟುಂಬದ ಮೇಲೆ ಈತ ತೀವ್ರ ಆಕ್ರೋಶ ಮತ್ತು ಪ್ರತೀಕಾರದ ಜ್ವಾಲೆಯನ್ನು ಹೊಂದಿದ್ದನು. ಶನಿವಾರ ಮುಂಜಾನೆ ಕತ್ತಲೆಯಲ್ಲೇ ಸಶಸ್ತ್ರವಾಗಿ ಎದ್ದ ಆತ, ಮೊದಲು ತನ್ನದೇ ಮನೆಯಲ್ಲಿದ್ದ ಪತ್ನಿ ಸರಿತಾ ಮತ್ತು ಇಬ್ಬರು ಮಕ್ಕಳನ್ನು ಚಾಕುವಿನಿಂದ ಇರಿದು ಅತ್ಯಂತ ಕ್ರೂರವಾಗಿ ಕೊಂದಿದ್ದಾನೆ.
ಅಷ್ಟಕ್ಕೇ ನಿಲ್ಲದ ಈತನ ರಕ್ತಪಿಪಾಸು ತನ, ತಕ್ಷಣವೇ ಪಕ್ಕದ ಸಂತ್ರಸ್ತ ಬಾಲಕಿಯ ಮನೆಗೆ ನುಗ್ಗಿ ಗಾಢ ನಿದ್ರೆಯಲ್ಲಿದ್ದ ಸಂತ್ರಸ್ತೆ, ಆಕೆಯ ತಾಯಿ ಹಾಗೂ ಅಜ್ಜಿಯ ಮೇಲೆ ಚಾಕುವಿನಿಂದ ಸರಣಿ ದಾಳಿ ನಡೆಸಿ ಸ್ಥಳದಲ್ಲೇ ಹೆಣವಾಗಿಸಿದ್ದಾನೆ. ಆರು ಮಂದಿಯನ್ನು ಸಾರಾಸಗಟಾಗಿ ಕಟುಕರಂತೆ ಕೊಚ್ಚಿ ಕೊಂದ ಬಳಿಕ, ಆರೋಪಿ ರಾಜ್‌ಕುಮಾರ್ ನೇರವಾಗಿ ತನ್ನ ಪೋಷಕರಿಗೆ ಫೋನ್ ಮಾಡಿ ಇಡೀ ಘಟನೆಯನ್ನು ಹೆಮ್ಮೆಯಿಂದ ತಿಳಿಸಿದ್ದಾನೆ. ಇದನ್ನು ಕೇಳಿ ದಿಗ್ಭ್ರಮೆಗೊಂಡ ಪೋಷಕರು ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸೈಬರಾಬಾದ್ ಪೊಲೀಸ್ ಕಮಿಷನರ್ (CP) ತರುಣ್ ಜೋಶಿ ಮತ್ತು ಡಿಸಿಪಿ ಯೋಗೇಶ್ ಗೌತಮ್ ಅವರು ಹಿರಿಯ ಅಧಿಕಾರಿಗಳ ತಂಡ ಹಾಗೂ ವಿಧಿವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿಯೊಂದಿಗೆ ದೈವಲಗುಡದ ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಇಡೀ ತೆಲಂಗಾಣ ಮತ್ತು ನೆರೆಯ ರಾಜ್ಯಗಳನ್ನು ನಡುಗಿಸಿರುವ ಈ ಭೀಕರ ಹತ್ಯಾಕಾಂಡದ ಕುರಿತು ತನಿಖೆ ತೀವ್ರಗೊಂಡಿದೆ.