ವಿದೇಶಿ ವಿನಿಮಯ ಉಲ್ಲಂಘನೆ: ಉದ್ಯಮಿ ಧರ್ಮೇಶ್ ಸಂಗಾಣಿ ನಿವಾಸದ ಮೇಲೆ ಇಡಿ ದಾಳಿ!

ಹೊಸದಿಲ್ಲಿ : ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದಲ್ಲಿ ಜಾರಿ ನಿರ್ದೇಶನಾಲಯ ಕಲಾನಿ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್ ಹಾಗೂ ಅದರ ನಿರ್ದೇಶಕ, ಉದ್ಯಮಿ ಧರ್ಮೇಶ್ ಸಂಗಾಣಿ ಅವರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ.
ವಿದೇಶಿ ಆಸ್ತಿಗಳು, ವಿದೇಶಿ ಬ್ಯಾಂಕ್ ಖಾತೆಗಳು ಹಾಗೂ ಗಡಿಯಾಚೆಗಿನ ವಹಿವಾಟುಗಳಿಗೆ ಸಂಬಂಧಿಸಿ ವಿದೇಶಿ ವಿನಿಮಯ ನಿಯಮ ಉಲ್ಲಂಘನೆ ಆರೋಪದಲ್ಲಿ ಈ ಶೋಧ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಧರ್ಮೇಶ್ ಸಂಗಾಣಿ ಅವರು ಉದ್ಯಮಿ ಮತ್ತು ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ. ನಟ ಹಾಗೂ ದೂರದರ್ಶನ ನಿರೂಪಕ ಶೇಖರ್ ಸುಮನ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಅಲ್ಲದೆ, ಶೇಖರ್ ಸುಮನ್ ಫಿಲ್ಡ್ ಅಕಾಡೆಮಿಯ ಸಹ-ಸಂಸ್ಥಾಪಕರಾಗಿದ್ದಾರೆ.

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ವೇಳೆ ಬಹಿರಂಗಪಡಿಸದ ವಿದೇಶಿ ಆಸ್ತಿಗಳು, ವಿದೇಶಿ ಬ್ಯಾಂಕ್ ಖಾತೆಗಳು ಮತ್ತು ಅನುಮಾನಾಸ್ಪದ ಗಡಿಯಾಚೆಗಿನ ವಹಿವಾಟುಗಳಿಗೆ ಸಂಬಂಧಿಸಿ ಪುರಾವೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಕೆನಡಾ, ಅಮೆರಿಕಾ ಮತ್ತು ಯುಎಇಯಲ್ಲಿ ಬಹಿರಂಗಪಡಿಸದ ವಿದೇಶಿ ಬ್ಯಾಂಕ್ಗಳ ಖಾತೆಗಳಿರುವುದನ್ನು ಪತ್ತೆ ಹಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಶೋಧ ಕಾರ್ಯಾಚರಣೆಯ ಸಂದರ್ಭದಲ್ಲಿ ಧರ್ಮೇಶ್ ಸಂಗಾಣಿ ಅವರು ತಮ್ಮ ಮೊಬೈಲ್ ಫೋನ್ 13ನೇ ಮಹಡಿಯಿಂದ ಎಸೆದು ಡಿಜಿಟಲ್ ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದರು ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಳಿಕ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.