ಉಡುಪಿ: ಶಾಲಾ ಬಸ್ ಪಲ್ಟಿ; 7 ವಿದ್ಯಾರ್ಥಿಗಳಿಗೆ ಗಾಯ, ಕೂದಲೆಳೆ ಅಂತರದಲ್ಲಿ ತಪ್ಪಿದ ಭಾರಿ ಅನಾಹುತ!

ಉಡುಪಿ : ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಖಾಸಗಿ ಶಾಲಾ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಉರುಳಿ ಬಿದ್ದ ಪರಿಣಾಮ ಏಳು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಸರಳೆಬೆಟ್ಟು ಕೊಡಂಗೆ ದೇವಸ್ಥಾನದ ಸಮೀಪ ಇಂದು (ಶುಕ್ರವಾರ) ಬೆಳಗ್ಗೆ ಸಂಭವಿಸಿದೆ.

ಮಣಿಪಾಲದ ‘ಕ್ರೈಸ್ಟ್ ಆಂಗ್ಲ ಮಾಧ್ಯಮ ಶಾಲೆ’ಗೆ ಸೇರಿದ ಬಸ್ ಇದಾಗಿದ್ದು, ಎಂದಿನಂತೆ ಬೆಳಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದೊಯ್ಯುತ್ತಿತ್ತು. ಕೊಡಂಗೆ ದೇವಸ್ಥಾನದ ಸಮೀಪದ ಕಿರಿದಾದ ತಿರುವಿನಲ್ಲಿ ಚಾಲಕ ಬಸ್ಸನ್ನು ರಿವರ್ಸ್ ತೆಗೆಯುತ್ತಿದ್ದಾಗ ನಿಯಂತ್ರಣ ತಪ್ಪಿ ಪಕ್ಕದಲ್ಲೇ ಇದ್ದ ದೊಡ್ಡ ತೋಡಿಗೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಅಪಘಾತದ ಸಮಯದಲ್ಲಿ ಬಸ್ಸಿನಲ್ಲಿ ಸುಮಾರು 20 ಶಾಲಾ ವಿದ್ಯಾರ್ಥಿಗಳಿದ್ದರು. ಬಸ್ ಉರುಳಿ ಬೀಳುತ್ತಿದ್ದಂತೆ ಮಕ್ಕಳು ಭಯದಿಂದ ಕಿರುಚಾಡಿದ್ದು, ಸ್ಥಳೀಯರು ತಕ್ಷಣವೇ ಓಡೋಡಿ ಬಂದು ಮಕ್ಕಳನ್ನು ರಕ್ಷಿಸಿದ್ದಾರೆ. ಅಪಘಾತದಲ್ಲಿ ಏಳು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು,ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಮಣಿಪಾಲ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೇನ್ ಮೂಲಕ ಬಸ್ಸನ್ನು ಮೇಲಕ್ಕೆತ್ತಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಚಾಲಕನ ನಿರ್ಲಕ್ಷ್ಯದ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.