ಭಿವಂಡಿಯಲ್ಲಿ ರಿಯಲ್ ಲೈಫ್ ಸ್ಪೈಡರ್‌ಮ್ಯಾನ್: ಜಲಾವೃತ ರಸ್ತೆಯಲ್ಲಿ ಸಂಚಾರ ನಿಯಂತ್ರಿಸಿದ ಯುವಕ!

ಮುಂಬೈ: ಭಾರಿ ಮುಂಗಾರು ಮಳೆಯಿಂದಾಗಿ ನಗರವು ಜಲಾವೃತಗೊಂಡು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ನಗರಸಭೆಯ ಅಧಿಕಾರಿಗಳ ವಿಳಂಬ ಧೋರಣೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಸ್ಪೆಡರ್-ಮ್ಯಾನ್ ವೇಷ ಧರಿಸಿ ರಸ್ತೆಗಿಳಿದು ಜನರಿಗೆ ನೆರವಾಗುವ ವೀಡಿಯೋ ಸಾಮಾಜಿಕ ತಾಣದಲ್ಲಿ ಪ್ರಶಂಸೆ ಗಳಿಸುತ್ತಿದೆ. ಮಳೆಯ ಸಮಯದಲ್ಲಿ ಜನರಿಗೆ ಸಹಾಯ ಮಾಡಲು ತಾನು ಸೂಪರ್ಹೀರೋ ಸಿನಿಮಾ ಪ್ರೇರಣೆ ಪಡೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಭೀವಂಡಿಯ ನಿವಾಸಿ ಶಾದಾಬ್ ಸ್ಪೆಡರ್-ಮ್ಯಾನ್ ವೇಷ ಧರಿಸಿ ಖುದ್ದಾಗಿ ವಾಹನಗಳನ್ನು ನಿಯಂತ್ರಿಸುವ ಮತ್ತು ನಿಂತ ನೀರನ್ನು ತೆರವುಗೊಳಿಸುವ ಕಾರ್ಯವನ್ನು ಮಾಡುತ್ತಿದ್ದು, ಸವಾರರ ಸಂಕಷ್ಟವನ್ನು ಕಡಿಮೆ ಮಾಡಲು ತನ್ನದೇ ರೀತಿಯಲ್ಲಿ ಪ್ರಯತ್ನಿಸುತ್ತಿದ್ದಾರೆ.ANI ಸಂಸ್ಥೆಯು ಈ ಬಗ್ಗೆ ಎಕ್ಸ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದು”ಭಿವಂಡಿಯಲ್ಲಿ ಜಲಾವೃತಗೊಂಡ ರಸ್ತೆಗಳ ನಡುವೆ ಸ್ಥಳೀಯ ನಿವಾಸಿ ಶಾದಾಬ್ ಅವರು ಸ್ಟೈಡರ್-ಮ್ಯಾನ್ ವೇಷ ಧರಿಸಿ ಸಂಚಾರ ನಿಯಂತ್ರಣಕ್ಕೆ ಸಹಾಯ ಮಾಡುತ್ತಿದ್ದಾರೆ” ಎಂದು ಬರೆದಿದೆ.
ವಾಹನಗಳನ್ನು ನಿಯಂತ್ರಿಸುತ್ತಾ ಮತ್ತು ಸವಾರರಿಗೆ ಸಹಾಯ ಮಾಡುತ್ತಾ ತಮ್ಮ ಕೆಲಸವನ್ನು ಪ್ರಶಂಸಿಸುತ್ತಿದ್ದ ಕೆಲವರಿಗೆ ಹಸ್ತಲಾಘವ ಮಾಡುತ್ತಾ ಶಾದಾಬ್ ಮುನ್ನಡೆಯುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು.
“ಇಲ್ಲಿ ನೀರಿನ ಸಮಸ್ಯೆಯನ್ನು ಪರಿಹರಿಸಲು ಮುನ್ಸಿಪಲ್ ಅಧಿಕಾರಿಗಳು ಯಾರೂ ಬಾರದಿದ್ದನ್ನು ನಾನು ಗಮನಿಸಿದೆ. ಸಿನಿಮಾಗಳಲ್ಲಿ ಸ್ಪೆಡರ್-ಮ್ಯಾನ್ ಜನರಿಗೆ ಹೇಗೆ ಸಹಾಯ ಮಾಡುತ್ತಾನೆ ಮತ್ತು ಜೀವಗಳನ್ನು ಉಳಿಸುತ್ತಾನೆ ಎಂಬುದರಿಂದ ಪ್ರೇರಿತನಾಗಿ, ನಾನು ನಿಜ ಜೀವನದಲ್ಲೂ ಅದನ್ನೇ ಮಾಡಲು ನಿರ್ಧರಿಸಿದೆ. ಇತರರಿಗೆ ಸಹಾಯ ಮಾಡುವುದು ಮತ್ತು ನಿಂತ ನೀರನ್ನು ತೆರವುಗೊಳಿಸುವುದು ನನ್ನ ಉದ್ದೇಶವಾಗಿತ್ತು” ಎಂದು ಶಾದಾಬ್ ಪ್ರತಿಕ್ರಿಯಿಸಿದ್ದಾರೆ.ತಾವು ಸ್ಟೈಡರ್-ಮ್ಯಾನ್ ನಿಂದ ಪ್ರೇರಿತರಾಗಿದ್ದರಿಂದ ಈ ವೇಷ ಧರಿಸಿರುವುದಾಗಿ ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು.
ಸಾಮಾಜಿಕ ಮಾಧ್ಯಮಗಳು ಏನು ಹೇಳಿದವು?
ಈ ಬಗ್ಗೆ ಸಾಮಾಜಿಕ ತಾಣದಲ್ಲಿ ಪ್ರಶಂಸೆಯ ಮಾತನ್ನಾಡುತ್ತಿದ್ದಾರೆ. “ಇದು ಒಂದು ಸಕಾರಾತ್ಮಕ ನಡೆಯಲ್ಲದೆ ಮತ್ತೇನು ಎಂದು ನನಗೆ ಗೊತ್ತಿಲ್ಲ” ಎಂದು ಒಬ್ಬ ವ್ಯಕ್ತಿ ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, “ಸ್ಟೈಡರ್-ಮ್ಯಾನ್: ಇಂಡಿಯಾ ಚಾಪ್ಟರ್” ಎಂದು ಪೋಸ್ಟ್ ಮಾಡಿದ್ದಾರೆ.
ಮೂರನೇ ವ್ಯಕ್ತಿ “ಜನರು ಆತನನ್ನು ಹುಚ್ಚ ಎಂದು ಕರೆಯಬಹುದು, ಆದರೆ ನಾನು ಆತನನ್ನು ಅಪರೂಪದ ಜೀವಿ ಎಂದು ಕರೆಯುತ್ತೇನೆ. ಪ್ರತಿಯೊಬ್ಬರೂ ‘ಇದರಿಂದ ನನಗೇನು ಲಾಭ?’ ಎಂದು ಕೇಳುವುದರಲ್ಲಿ ಬ್ಯುಸಿಯಾಗಿರುವ ಈ ಕಾಲದಲ್ಲಿ ಈ ವ್ಯಕ್ತಿ ಆ ಪಾಠವನ್ನೇ ಸಂಪೂರ್ಣವಾಗಿ ಮರೆತುಬಿಟ್ಟಂತೆ ಕಾಣುತ್ತದೆ. ನಿಸ್ವಾರ್ಥತೆ ಎಂಬುದು ಅಳಿವಿನ ಅಂಚಿನಲ್ಲಿರಬಹುದು. ಆದರೆ ಆತ ಅದನ್ನು ಜೀವಂತವಾಗಿಡುವಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾನೆ” ಎಂದು ಬರೆದಿದ್ದಾರೆ.00
ಮತ್ತೋರ್ವ ವ್ಯಕ್ತಿ “ಸ್ಟೈಡರ್ಮ್ಯಾನ್ – ಹೊಚ್ಚ ಹೊಸ ದಿನ, ಅದೇ ಹಳೆಯ ಸಮಸ್ಯೆ” ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಭಾರಿ ಮಳೆಯು ಮಹಾರಾಷ್ಟ್ರದಲ್ಲಿ ವ್ಯಾಪಕ ಹಾನಿ ಉಂಟುಮಾಡಿದೆ. ಜುಲೈ 1 ರಿಂದ ಸುರಿಯುತ್ತಿರುವ ಮಳೆಗೆ ಕನಿಷ್ಠ ಹತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ.
