ಉಜ್ಬೇಕಿಸ್ತಾನ್: ಸಹಪಾಠಿಯ ಹಲ್ಲೆಯಿಂದ ಕೇರಳದ ವೈದ್ಯಕೀಯ ವಿದ್ಯಾರ್ಥಿನಿ ಸಾ*ವು; ಆರೋಪಿ ವಶಕ್ಕೆ!

ಅಲಪ್ಪುಳ : ಉಜ್ಬೇಕಿಸ್ತಾನ್ನಲ್ಲಿ ವೈದ್ಯಕೀಯ (MBBS) ವ್ಯಾಸಂಗ ಮಾಡುತ್ತಿದ್ದ ಕೇರಳ ಮೂಲದ 22 ವರ್ಷದ ವಿದ್ಯಾರ್ಥಿನಿಯೊಬ್ಬಳು ಸಹಪಾಠಿಯೊಂದಿಗೆ ನಡೆದ ಕ್ಷುಲ್ಲಕ ಜಗಳದ ವೇಳೆ ತಲೆಗೆ ಲ್ಯಾಪ್ಟಾಪ್ನಿಂದ ಹೊಡೆದ ಪರಿಣಾಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಅತ್ಯಂತ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೃತರನ್ನು ಕೇರಳದ ಅಲಪ್ಪುಳ ಜಿಲ್ಲೆಯ ಹರಿಪಾದ್ ಪಿಲಾಪ್ಪುಳ ಮೂಲದ ಸವರಿಯಾ (22) ಎಂದು ಗುರುತಿಸಲಾಗಿದೆ. ಹತ್ಯೆ ಎಸಗಿದ ಮಲಪ್ಪುರಂನ ಪೆರಿಂಥಲ್ಮನ್ನಾ ಮೂಲದ ಸಹಪಾಠಿ ಸಧರುಲ್ ಅನಮ್ ಎಂಬಾತನನ್ನು ಉಜ್ಬೇಕಿಸ್ತಾನ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸುಮಾರು ನಾಲ್ಕು ದಿನಗಳ ಹಿಂದೆ ಉಜ್ಬೇಕಿಸ್ತಾನ್ನ ಮೆಡಿಕಲ್ ಕಾಲೇಜು ಹಾಸ್ಟೆಲ್ನಲ್ಲಿ ಸವರಿಯಾ ಹಾಗೂ ಆರೋಪಿ ಸಧರುಲ್ ಅನಮ್ ನಡುವೆ ವೈಯಕ್ತಿಕ ವಿಚಾರವಾಗಿ ಭೀಕರ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಕೋಪದ ಉತ್ತುಂಗಕ್ಕೇರಿದ ಆರೋಪಿ ಸಧರುಲ್, ಅಲ್ಲೇ ಇದ್ದ ಲ್ಯಾಪ್ಟಾಪ್ ಎತ್ತಿ ಸವರಿಯಾ ತಲೆಗೆ ಬಲವಾಗಿ ಹೊಡೆದಿದ್ದಾನೆ. ಹಲ್ಲೆಯಿಂದಾಗಿ ತಲೆಗೆ ಗಂಭೀರವಾಗಿ ಗಾಯಗೊಂಡು ಪ್ರಜ್ಞೆ ತಪ್ಪಿ ಬಿದ್ದಿದ್ದ ವಿದ್ಯಾರ್ಥಿನಿಯನ್ನು ತಕ್ಷಣವೇ ಅಲ್ಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮೆದುಳಿನಲ್ಲಿ ತೀವ್ರ ರಕ್ತಸ್ರಾವ (Internal Bleeding) ಉಂಟಾದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಆಕೆ ಕೊನೆಯುಸಿರೆಳೆದಿದ್ದಾಳೆ.
ವಿದೇಶದಲ್ಲಿ ಮಗಳು ಕೊಲೆಯಾದ ಸುದ್ದಿ ತಿಳಿಯುತ್ತಿದ್ದಂತೆ ಆಕೆಯ ಚಿಕ್ಕಪ್ಪ ತಕ್ಷಣವೇ ಉಜ್ಬೇಕಿಸ್ತಾನ್ಗೆ ಪ್ರಯಾಣ ಬೆಳೆಸಿ, ರಾಯಭಾರ ಕಚೇರಿಯ ಮುಖಾಂತರ ಮೃತದೇಹವನ್ನು ಭಾರತಕ್ಕೆ ತರಲು ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದರು. ಅದರಂತೆ ಮೃತದೇಹವನ್ನು ಮಂಗಳವಾರ (ಜುಲೈ 7, 2026) ನವದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತರಲಾಗಿದ್ದು, ಅಲ್ಲಿಂದ ಅಂತಿಮ ವಿಧಿವಿಧಾನಗಳಿಗಾಗಿ ಕೊಚ್ಚಿ ಮುಖಾಂತರ ಅಲಪ್ಪುಳದಲ್ಲಿರುವ ಆಕೆಯ ಹುಟ್ಟೂರಿಗೆ ಕೊಂಡೊಯ್ಯುವ ಸಿದ್ಧತೆ ನಡೆದಿದೆ. ಕುವೈತ್ನಲ್ಲಿ ಕೆಲಸ ಮಾಡುತ್ತಿರುವ ಮೃತರ ತಂದೆ ವೀಸಾ ಮತ್ತು ದಾಖಲಾತಿ ಸಮಸ್ಯೆಗಳಿಂದಾಗಿ ಉಜ್ಬೇಕಿಸ್ತಾನ್ಗೆ ಹೋಗಲಾಗದೆ ನೇರವಾಗಿ ಕೇರಳಕ್ಕೆ ಮರಳಿದ್ದಾರೆ. ಮಗಳು ವೈದ್ಯೆಯಾಗಿ ದೇಶಕ್ಕೆ ಮರಳುತ್ತಾಳೆ ಎಂದು ಕಾಯುತ್ತಿದ್ದ ಹೆತ್ತವರು ಹಾಗೂ ಕಿರಿಯ ಸಹೋದರನ ಆಕ್ರಂದನ ಮುಗಿಲು ಮುಟ್ಟಿದೆ.