ಅಂತ್ಯಗೊಂಡ ಒಂದು ಯುಗ: ವಿಶ್ವಕಪ್ನಿಂದ ಬ್ರೆಝಿಲ್ ಹೊರಬೀಳುತ್ತಿದ್ದಂತೆ ಕಣ್ಣೀರಿಟ್ಟ ನೇಮರ್; 16 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ವಿದಾಯ!

ನ್ಯೂಜೆರ್ಸಿ: 2026ರ ಫಿಫಾ ವಿಶ್ವಕಪ್ನ ಪ್ರೀ ಕ್ವಾರ್ಟ್ರಫೈನಲ್ನಲ್ಲಿ ನಾರ್ವೆ ವಿರುದ್ಧ ಬ್ರೆಝಿಲ್ ತಂಡ ಅನುಭವಿಸಿದ ಆಘಾತಕಾರಿ ಸೋಲಿನ ಬೆನ್ನಲ್ಲೇ, ಬ್ರೆಝಿಲ್ನ ದಿಗ್ಗಜ ಆಟಗಾರ ನೇಮರ್ ಜೂನಿಯರ್ ಅಂತರರಾಷ್ಟ್ರೀಯ ಫುಟ್ಬಾಲ್ಗೆ ನಿವೃತ್ತಿ ಘೋಷಿಸಿದ್ದಾರೆ.
ಬ್ರೆಝಿಲ್ ಪರ ಆಡಿದ ಅತ್ಯಂತ ಪ್ರತಿಷ್ಠಿತ ಆಟಗಾರರಲ್ಲಿ ಒಬ್ಬರಾಗಿರುವ ನೇಮರ್, 16 ವರ್ಷಗಳ ಅಂತರರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಬ್ರೆಝಿಲ್ ಪರ 129 ಪಂದ್ಯಗಳಲ್ಲಿ 80 ಗೋಲುಗಳನ್ನು ಗಳಿಸಿರುವ ಅವರು, ದೇಶದ ಸಾರ್ವಕಾಲಿಕ ಅಗ್ರ ಗೋಲುಗಾರ ಎಂಬ ದಾಖಲೆಯೊಂದಿಗೆ ಅಂತರರಾಷ್ಟ್ರೀಯ ವೃತ್ತಿಜೀವನವನ್ನು ಮುಕ್ತಾಯಗೊಳಿಸಿದ್ದಾರೆ.

ನ್ಯೂಜೆರ್ಸಿಯ ಮೆಟ್ಲೈಫ್ ಕ್ರೀಡಾಂಗಣದಲ್ಲಿ ನಡೆದ ನಾರ್ವೆ ವಿರುದ್ಧದ ಪಂದ್ಯವೇ ಬ್ರೆಝಿಲ್ ಪರ ನೇಮರ್ ಅವರ ಕೊನೆಯ ಪಂದ್ಯವಾಯಿತು. ಇದೇ ಕ್ರೀಡಾಂಗಣದಲ್ಲಿ ಅವರು 2010ರಲ್ಲಿ ಅಂತರರಾಷ್ಟ್ರೀಯ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ್ದರು. ಮಾಜಿ ಬಾರ್ಸಿಲೋನಾ ಮತ್ತು ಪ್ಯಾರಿಸ್ ಸೇಂಟ್-ಜರ್ಮೈನ್ ಆಟಗಾರರಾದ ನೇಮರ್, ಪಂದ್ಯದಲ್ಲಿ ಪೆನಾಲ್ಟಿ ಮೂಲಕ ಗೋಲು ಗಳಿಸಿದರೂ, ಬ್ರೆಝಿಲ್ ತಂಡದ ಸೋಲನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.
ಪಂದ್ಯ ಮುಗಿದ ಬಳಿಕ ನೇಮರ್ ಭಾವನಾತ್ಮಕವಾಗಿ ಕುಸಿದುಬಿದ್ದರು. ಅಂತಿಮ ಶಿಳ್ಳೆ ಮೊಳಗಿದ ತಕ್ಷಣ ಅವರು ಕಣ್ಣೀರಿಟ್ಟರು. ಬ್ರೆಝಿಲ್ ತಂಡದ ಸಹ ಆಟಗಾರರು ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಅವರು ತೀವ್ರ ನಿರಾಸೆಯಲ್ಲಿರುವುದು ಕಂಡುಬಂತು.
“ನಾನು ಪ್ರಯತ್ನಿಸಿದೆ, ಮತ್ತೆ ಮತ್ತೆ ಪ್ರಯತ್ನಿಸಿದೆ. ಆದರೆ ಈಗ ಎಲ್ಲವೂ ಮುಗಿದಿದೆ. ನಾನು ಇಲ್ಲಿಯೇ ಆರಂಭಿಸಿದ್ದೆ: ಇಲ್ಲಿಯೇ ನನ್ನ ಪಯಣ ಮುಗಿಯುತ್ತಿದೆ” ಎಂದು ನೇಮರ್ ಪಂದ್ಯದ ಬಳಿಕ ಗ್ಲೋಬೊಗೆ ತಿಳಿಸಿದ್ದಾರೆ.
ಅಂತರರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಹೇಳಿದ್ದರೂ, ಸ್ಯಾಂಟೋಸ್ ಎಫ್ಸಿ ಪರ ತಮ್ಮ ಕ್ಲಬ್ ವೃತ್ತಿಜೀವನವನ್ನು ಮುಂದುವರಿಸಲಿದ್ದಾರೆ. ಮುಂದಿನ ಋತುಗಳಲ್ಲಿ ಆಡುವ ಕುರಿತು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದ್ದಾರೆ.
ಇದೇ ವೇಳೆ, ನಾರ್ವೆ ವಿರುದ್ಧದ ಸೋಲಿನೊಂದಿಗೆ ವಿಶ್ವಕಪ್ ನಾಕೌಟ್ ಹಂತದಲ್ಲಿ ಯುರೋಪಿಯನ್ ತಂಡಗಳ ವಿರುದ್ಧ ಬ್ರೆಝಿಲ್ನ ವೈಫಲ್ಯದ ಸರಣಿ ಮುಂದುವರಿದಿದೆ. ಬ್ರೆಝಿಲ್ ತಂಡವು 2002ರ ವಿಶ್ವಕಪ್ ಫೈನಲ್ನಲ್ಲಿ ಜರ್ಮನಿಯನ್ನು ಸೋಲಿಸಿ ಪ್ರಶಸ್ತಿ ಗೆದ್ದ ಬಳಿಕ, ವಿಶ್ವಕಪ್ ನಾಕೌಟ್ ಹಂತದಲ್ಲಿ ಯಾವುದೇ ಯುರೋಪಿಯನ್ ತಂಡವನ್ನು ಮಣಿಸಲು ಸಾಧ್ಯವಾಗಿಲ್ಲ.