Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರ್ಬಳಕೆ: ಎಂಟು ಮಂದಿ ಬಂಧನ, 80 ಲಕ್ಷ ರೂ. ನಗದು ವಶ!

Spread the love

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಹಣ ಎಣಿಕೆ ವೇಳೆ ಹಣ ದುರ್ಬಳಕೆ ನಡೆದಿರುವ ಆರೋಪದ ತನಿಖೆಯಲ್ಲಿ ಮಹತ್ವದ ಸಾಕ್ಷ್ಯಗಳು ದೊರೆತಿವೆ. ಪ್ರಕರಣದಲ್ಲಿ ಬಂಧಿತರಾದ ಎಂಟು ಮಂದಿಯಲ್ಲಿ ಕನಿಷ್ಠ ಐವರು ನಗದು ಬಂಡಲ್‌ಗಳನ್ನು ತೆಗೆದು ತಮ್ಮ ಬಟ್ಟೆ ಮತ್ತು ಸಾಕ್ಸ್ ಗಳಲ್ಲಿ ಮರೆಮಾಚುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂದಿರದ ಪಿಲಿಗ್ರಿಮ್ ಫೆಸಿಲಿಟಿ ಸೆಂಟರ್‌ನಲ್ಲಿ ಕಳೆದ 45 ದಿನಗಳ ಅವಧಿಯಲ್ಲಿ ದಾಖಲಾದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ದೇಣಿಗೆ ಹಣ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಕೆಲವು ಸಿಬ್ಬಂದಿ ನೋಟುಗಳ ಬಂಡಲ್ ಗಳನ್ನು ತೆಗೆದು ಮರೆಮಾಚಿರುವುದು ಪತ್ತೆಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ನಿವಾಸಗಳು ಮತ್ತು ಇತರೆ ಸ್ಥಳಗಳಲ್ಲಿ ಶೋಧ ನಡೆಸಲಾಗಿದ್ದು, ಇದುವರೆಗೆ ಸುಮಾರು 80 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿದ ದೂರಿನ ಮೇರೆಗೆ ಜೂನ್ 25ರಂದು ಎಫ್‌ಐಆ‌ರ್ ದಾಖಲಿಸಲಾಗಿದ್ದು, ಅವಿನಾಶ್ ಶುಕ್ಲಾ ಲವಕುಶ್ ಮಿಶ್ರಾ, ಅನುಕಲ್ಸ್ ಮಿಶ್ರಾ, ಮನೀಷ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ರಾಮ್ ಶಂಕರ್ ಯಾದವ್ ಅಲಿಯಾಸ್ ಟಿನ್ನು ಶ್ರೀವಾಸ್ತವ್ ಮತ್ತು ಸುಭಾಷ್ ಯಾದವ್ ಅವರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಟಿನ್ನು ಯಾದವ್ ಅವರು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕನಾಗಿದ್ದು, ಮನೀಷ್ ಯಾದವ್ ಟಿನ್ನು ವಿನ ಸೋದರಳಿಯರಾಗಿದ್ದಾನೆ. ಅನುಕಲ್ಸ್ ಮಿಶ್ರಾ, ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ಮನೀಷ್ ಯಾದವ್ ಅವರಿಗೆ ಸಂಬಂಧಿಸಿದ ಸ್ಥಳಗಳಿಂದ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮಂದಿರದ ವಿವಿಧ ಹುಂಡಿಗಳಲ್ಲಿ ಸಂಗ್ರಹವಾಗುವ ನೋಟು ಮತ್ತು ನಾಣ್ಯಗಳನ್ನು ಎಣಿಸಲು ಟ್ರಸ್ಟ್ ಸುಮಾರು 50 ಮಂದಿಯನ್ನು ನಿಯೋಜಿಸಿತ್ತು ಎಂದು ತಿಳಿದುಬಂದಿದೆ.
“ಸಿಸಿಟಿವಿ ದೃಶ್ಯಾವಳಿಗಳಲ್ಲಿ ಐವರು ವ್ಯಕ್ತಿಗಳು ನೋಟುಗಳ ಬಂಡಲ್ ಗಳನ್ನು ತೆಗೆದುಕೊಂಡು ತಮ್ಮ ಬಟ್ಟೆಗಳಲ್ಲಿ ಅಥವಾ ಸಾಕ್ಸ್ ಗಳಲ್ಲಿ ಮರೆಮಾಚುತ್ತಿರುವುದು ಕಂಡುಬಂದಿದೆ. ಈ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ನಡೆಸಿದ ಶೋಧದಲ್ಲಿ ನಗದು ಪತ್ತೆಯಾಗಿದೆ. ಆದರೆ, ಸಿಸಿಟಿವಿ ದೃಶ್ಯಾವಳಿಗಳನ್ನು ಕೇವಲ 45 ದಿನಗಳವರೆಗೆ ಮಾತ್ರ ಸಂಗ್ರಹಿಸಿಡಲಾಗಿದ್ದರಿಂದ, ಈ ದುರ್ಬಳಕೆ ಎಷ್ಟು ಸಮಯದಿಂದ ನಡೆಯುತ್ತಿತ್ತು ಎಂಬುದನ್ನು ಖಚಿತಪಡಿಸಲು ಸಾಧ್ಯವಾಗಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳುವಾದ ಹಣವನ್ನು ಬಳಸಿ ಯಾವುದೇ ಆಸ್ತಿ ಖರೀದಿಸಲಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ಆರೋಪಿಗಳಿಂದ ವಶಪಡಿಸಿಕೊಂಡ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ದೇಣಿಗೆ ಹಣವನ್ನು ಬೇರೆ ಮಾರ್ಗಗಳಿಂದಲೂ ದುರ್ಬಳಕೆ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ. ಬ್ಯಾಂಕ್ ಸಿಬ್ಬಂದಿಯ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದಲ್ಲಿ ಬಂಧಿತರಾದ ಎಂಟು ಮಂದಿಯಲ್ಲಿ ಆರು ಮಂದಿಯನ್ನು ವಾರಣಾಸಿ ಮೂಲದ ಮ್ಯಾನ್ ಪವರ್‌ ಸಂಸ್ಥೆಯಾದ ‘ಸೈನಿಕ್ ಸೆಕ್ಯುರಿಟೀಸ್’ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಿಸಿತ್ತು.

ಸೈನಿಕ್ ಸೆಕ್ಯುರಿಟೀಸ್ ಸಂಸ್ಥೆಯ ನಿರ್ದೇಶಕ ಗೌರವ್ ಸಿಂಗ್, “ನಮ್ಮ ಸಂಸ್ಥೆಯು ಕೇವಲ ಬೆಂಬಲ ಸಿಬ್ಬಂದಿಯನ್ನು ಒದಗಿಸುತ್ತದೆ. ಈ ಪ್ರಕರಣದಲ್ಲಿ ನೇಮಕ ಮಾಡಬೇಕಾದ ವ್ಯಕ್ತಿಗಳ ಹೆಸರುಗಳನ್ನು ಎಸ್‌ಬಿಐ ನೀಡಿತ್ತು. ನಾವು ಅವರ ದಾಖಲೆಗಳನ್ನು ಪರಿಶೀಲಿಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಿದ್ದೇವೆ. ಈ ವ್ಯಕ್ತಿಗಳು ಈ ಹಿಂದೆ ನಮ್ಮ ಸಂಸ್ಥೆಯಲ್ಲಿ ಕೆಲಸ ಮಾಡಿರಲಿಲ್ಲ” ಎಂದು ತಿಳಿಸಿದ್ದಾರೆ.
“ಎಣಿಕೆ ಕಾರ್ಯಕ್ಕೆ ನೇಮಕಗೊಂಡ ಅನೇಕ ಮಂದಿಯ ಹಿನ್ನೆಲೆ ಪರಿಶೀಲನೆ ಸಮರ್ಪಕವಾಗಿ ನಡೆದಿರಲಿಲ್ಲ. ಎಣಿಕೆ ಕೇಂದ್ರದ ಪ್ರವೇಶ ನಿಯಂತ್ರಣ ವ್ಯವಸ್ಥೆಯೂ ದುರ್ಬಲವಾಗಿತ್ತು. ಈ ಸಂಬಂಧ ಬ್ಯಾಂಕ್ ಅಧಿಕಾರಿಗಳ ಪಾತ್ರವನ್ನೂ ಪರಿಶೀಲಿಸಲಾಗುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಕುರಿತು ಕಳುಹಿಸಲಾದ ಪ್ರಶ್ನೆಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಕ್ರಿಯೆ ನೀಡಿಲ್ಲ.


Spread the love
Share:

administrator

Leave a Reply

Your email address will not be published. Required fields are marked *